UDUPI
ಶಾಲಾ ಸಶಕ್ತೀಕರಣ ಕಾರ್ಯಕ್ರಮದಡಿ 50 ಉತ್ತಮ ಮಾದರಿ ನೀಡಿ- ವನಿತಾ ತೊರವಿ
ಶಾಲಾ ಸಶಕ್ತೀಕರಣ ಕಾರ್ಯಕ್ರಮದಡಿ 50 ಉತ್ತಮ ಮಾದರಿ ನೀಡಿ- ವನಿತಾ ತೊರವಿ
ಉಡುಪಿ, ನವೆಂಬರ್ 17: ಮುಂದುವರಿದ ಜಿಲ್ಲೆ ಉಡುಪಿ ಸರ್ಕಾರಿ ಶಾಲೆಗಳ ಸಶಕ್ತೀಕರಣ ಹಿನ್ನಲೆಯಲ್ಲಿ ಕನಿಷ್ಠ 50 ಉತ್ತಮ ಮಾದರಿಗಳನ್ನು ನೀಡಿ; ಮೂಲಸೌಕರ್ಯ ಹೊಂದಿರದ ಶಾಲೆಗಳನ್ನು ಹಳೆ ವಿದ್ಯಾರ್ಥಿಗಳ ಸಂಘ ರಚನೆ ಮಾಡುವ ಮೂಲಕ ಅಭಿವೃದ್ಧಿ ಪಡಿಸಿರುವ ಬಗ್ಗೆ ರಾಜ್ಯಕ್ಕೆ ಮಾದರಿ ಜಿಲ್ಲೆಯಿಂದ ಸಿಗಲಿ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ವನಿತಾ ತೊರವಿ ಹೇಳಿದರು.
ಅವರಿಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಲಾದ ಸರ್ಕಾರಿ ಶಾಲಾ ಸಶಕ್ತೀಕರಣ ಕಾರ್ಯಕ್ರಮ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಈಗಾಗಲೇ 21-6-2017 ರಂದು ಆಯೋಗದ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಳೆ ವಿದ್ಯಾರ್ಥಿ ಸಂಘ ರಚಿಸಿ ನೆರವು ಪಡೆಯಲು ಸೂಚಿಸಲಾಗಿತ್ತು ಎಂದು ಹೇಳಿದರು.
ಎಲ್ಲ ಶಾಲೆಗಳಲ್ಲೂ ಶೌಚಾಲಯ, ಕೈತೊಳೆಯುವ ಪದ್ಧತಿ ಅಳವಡಿಸಲು, ಆವರಣಗೋಡೆ, ತರಕಾರಿ ತೋಟ, ಅಭಿವೃದ್ಧಿ, ಪಂಚಾಯಿತಿಗಳೊಂದಿಗೆ ಸೇರಿ ತ್ಯಾಜ್ಯ ವಿಲೇಗೂ ಸೂಚಿಸಲಾಗಿತ್ತು. ಹಲವು ಶಾಲೆಗಳಲ್ಲಿ ಈ ನಿಟ್ಟಿನಲ್ಲಿ ಪ್ರಗತಿಯಾಗಿದ್ದು, ಕೆಲವು ಶಾಲೆಗಳಲ್ಲಿರುವ ತಾಂತ್ರಿಕ ಸಮಸ್ಯೆಗಳನ್ನು ವಿದ್ಯಾಂಗ ಉಪನಿರ್ದೇಶಕರಾದ ಶೇಷಶಯನ ಅವರು ವಿವರಿಸಿದರು.
ಸಿಎಸ್‍ಆರ್ ಫಂಡ್, ದಾನಿಗಳು, ಹಳೆ ವಿದ್ಯಾರ್ಥಿ ಸಂಘಗಳ ನೆರವಿನಿಂದ ಹಣ ಹೊಂದಿಸಿ ಮಕ್ಕಳಿಗೆ ಉತ್ತಮ ಕಲಿಕಾ ವಾತಾವರಣ ನಿರ್ಮಿಸಿ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದರು. ‘ಶಾಲೆ ಕಡೆ ನನ್ನ ನಡೆ’ ವೇಳೆ ಶಾಲೆ ಬಿಟ್ಟ ಮಕ್ಕಳ ಪತ್ತೆಗೆ ವೆಬ್‍ಸೈಟ್‍ನ್ನು ತಯಾರಿಸಲಾಗಿದ್ದು, ಹಳೆವಿದ್ಯಾರ್ಥಿಗಳ ಕೊಡುಗೆಯ ದಾಖಲೀಕರಣಕ್ಕೂ ಇದೇ ವೆಬ್‍ಸೈಟ್‍ನಲ್ಲಿ ಅವಕಾಶ ಮಾಡಿಕೊಡಲು ಜಿಲ್ಲಾಧಿಕಾರಿಗಳು ಎನ್ ಐ ಸಿ ಇಂಜಿನಿಯರ್ ಹರ್ಷರಾಜ್‍ಗೆ ಸೂಚಿಸಿದರು.
ನವೆಂಬರ್ 25 ರೊಳಗೆ ಈ ಸಂಬಂಧ ಪ್ರಗತಿ ದಾಖಲಿಸಲು ಸಮಯಮಿತಿಯನ್ನು ಜಿಲ್ಲಾಧಿಕಾರಿಗಳು ನಿಗದಿಪಡಿಸಿದರು.
ಡಿಸೆಂಬರ್ 2ರಂದು ತಂಬಾಕು ಮುಕ್ತ ಜಿಲ್ಲೆಯನ್ನಾಗಿ ರೂಪಿಸಲು ಆರೋಗ್ಯ ಇಲಾಖೆ ಸಹಕಾರದೊಂದಿಗೆ ಶಿಕ್ಷಣ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೈಜೋಡಿಸಿ ಜಾಗೃತಿ ಜಾಥಾ ನಡೆಸಬೇಕೆಂದು ವನಿತ ತೊರವಿ ಹೇಳಿದರು.