FILM
ಲೈಂಗಿಕ ಕಿರುಕುಳ ಆರೋಪ: ನಟ ದಿಲೀಪ್ ಬಂಧನ

ಕೊಚ್ಚಿ: ನಟಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಖ್ಯಾತ ಮಲಯಾಳ ನಟ ದಿಲೀಪ್ ಅವರನ್ನು ಕೇರಳದ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ನಾಲ್ಕು ತಿಂಗಳ ತನಿಖೆ ಬಳಿಕ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ನಟಿಯನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿ ದಿಲೀಪ್ ವಿರುದ್ಧ ಆರೋಪ ಕೇಳಿಬಂದಿತ್ತು. ಹೀಗಾಗಿ ಜೂನ್ 28ರಂದು ದಿಲೀಪ್ ಅವರನ್ನು ಸುಮಾರು 13 ಗಂಟೆ ವಿಚಾರಣೆಗೆ ಒಳಪಡಿಸಲಾಗಿತ್ತು. ಇದಕ್ಕೂ ಮುನ್ನ, ಪ್ರಮುಖ ಆರೋಪಿ ಸುನಿಲ್ ಕುಮಾರ್ ಅಲಿಯಾಸ್ ಪಲ್ಸರ್ ಸುನಿಯನ್ನು ಬಂಧಿಸಿದ್ದ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಈತ ಕೇರಳದ ಚಿತ್ರೋದ್ಯಮದಲ್ಲಿ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ.

ಕ್ರೈಂ ಬ್ರ್ಯಾಂಚ್ ಐಜಿ ದಿನೇಂದ್ರ ಕಾಶ್ಯಪ್ ನೇತೃತ್ವದಲ್ಲಿ ತನಿಖೆ ನಡೆಸಲಾಗಿತ್ತು. ಎಡಿಜಿಪಿ ಬಿ. ಸಂಧ್ಯಾ ಅವರು ತನಿಖೆಯ ಮೇಲುಸ್ತುವಾರಿ ವಹಿಸಿದ್ದರು.
ಆರೋಪ ನಿರಾಕರಿಸಿದ್ದ ದಿಲೀಪ್: ಲೈಂಗಿಕ ಕಿರುಕುಳದ ಆರೋಪವನ್ನು ದಿಲೀಪ್ ನಿರಾಕರಿಸಿದ್ದರು. ಅಲ್ಲದೆ, ತಮ್ಮನ್ನು ವಿಚಾರಣೆಗೆ ಒಳಪಡಿಸಲಾಗಿಲ್ಲ. ಮನೆಗೆ ಯಾವ ಪೊಲೀಸ್ ಅಧಿಕಾರಿಯೂ ಬಂದಿಲ್ಲ. ವಿನಾ ಕಾರಣ ಪ್ರಕರಣದಲ್ಲಿ ತಮ್ಮ ಹೆಸರು ಎಳೆದು ತರಲಾಗುತ್ತಿದೆ. ಇದೆಲ್ಲ ತಮ್ಮ ವಿರುದ್ಧದ ಸಂಚು ಎಂದು ಆರೋಪಿಸಿದ್ದರು.
