DAKSHINA KANNADA
ರಸ್ತೆಯಲ್ಲಿ ಕುಸಿದುಬಿದ್ದ ವೃದ್ದ ಶ್ರೀ ಗೆ ಮಿಡಿದ ಮಹಿಳಾ ಕಾನ್ಸ್ ಟೇಬಲ್ ಭಾಗ್ಯಶ್ರೀ ಹೃದಯ

ರಸ್ತೆಯಲ್ಲಿ ಕುಸಿದುಬಿದ್ದ ವೃದ್ದ ಶ್ರೀ ಗೆ ಮಿಡಿದ ಮಹಿಳಾ ಕಾನ್ಸ್ ಟೇಬಲ್ ಭಾಗ್ಯಶ್ರೀ ಹೃದಯ
ಮಂಗಳೂರು, ಡಿಸೆಂಬರ್ 07 : ಬಿಸಿಲಿನ ಝಳ ಹಾಗೂ ಹಸಿವಿನಿಂದ ಬಸವಳಿದು ರಸ್ತೆ ಬದಿ ಬಿದ್ದ ಅನಾಥ ವೃದ್ದರೊಬ್ಬರಿಗೆ ನೀರು ಆಹಾರ ನೀಡಿ ಉಪಚರಿಸಿ ಮಾನವಿಯತೆ ಮೆರೆದ ಮಂಗಳೂರಿನ ಸಂಚಾರಿ ಪೊಲೀಸ್ ಠಾಣೆಯ ಮಹಿಳಾ ಸಿಬಂದಿ ಸಾರ್ವಜನಿಕರ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಮಂಗಳೂರು ಕಾಸರಗೋಡು ರಾಷ್ಟ್ರೀಯ ಹೆದ್ದಾರಿ 66ರ ಜಪ್ಪಿನಮೊಗರು ನೇತ್ರಾವತಿ ಸೇತುವೆಯ ಮೇಲೆ ಸುಮಾರು 60- 65 ವರ್ಷದ ವೃದ್ಧರೊಬ್ಬರು ವಿರೀತ ದನಿವು ಮತ್ತು ಬಿಸಿಲಿಗೆ ಬಸವಳಿದು ಕುಸಿದು ಬಿದ್ದಿದ್ದರು.

ಇದನ್ನು ನೋಡಿದ ಸಾರ್ವಜನಿಕರೊಬ್ಬರು ಸಮೀಪದ ಮಹಾಕಾಳಿ ಪಡ್ಪು ರೈಲ್ವೇ ಕ್ರಾಸ್ ಜಂಕ್ಷನ್ ನಲ್ಲಿ ಕರ್ತವ್ಯದಲ್ಲಿದ್ದ ದಕ್ಷಿಣ ಸಂಚಾರಿ ಪೊಲೀಸ್ ಠಾಣೆ ಸಿಬಂದಿ ಭಾಗ್ಯಶ್ರೀಯವರ ಗಮನಕ್ಕೆ ತಂದಿದ್ದಾರೆ.
ಭಾಗ್ಯಶ್ರೀ ಅವರು ತಕ್ಷಣ ವೃದ್ಧ ಕುಸಿದು ಬಿದ್ದ ಸ್ಥಳಕ್ಕೆ ಬಂದು ನೋಡಿದಾಗ ಆ ವ್ಯಕ್ತಿ ಸಂಪೂರ್ಣ ನಿತ್ರಾಣರಾಗಿದ್ದು ಮಾತನಾಡುವ ಸ್ಥಿತಿಯಲ್ಲೂ ಇರಲಿಲ್ಲ.
ಭಾಗ್ಯಶ್ರೀ ವ್ಯಕ್ತಿಗೆ ಕುಡಿಯುಲು ನೀರು ನೀಡಿ ಉಪಚರಿಸಿದ್ದಾರೆ.ಆದಾಗಲೇ ಅಲ್ಲಿಗಾಗಮಿಸಿದ ಆಟೋ ಚಾಲಕರೊಬ್ಬರು ಹಣ್ಣು ನೀಡಿದ್ದಾರೆ.
ನೀರು ಕುಡಿದು ಹಣ್ಣು ತಿಂದ ಬಳಿಕ ಆ ವ್ಯಕ್ತಿ ಸ್ವಲ್ಪ ಸುಧಾರಿಸಿಕೊಂಡಿದ್ದಾರೆ.
ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪ್ರತಿಕ್ರೀಯಿಸಿರುವ ಭಾಗ್ಯಶ್ರೀ ಮನುಷ್ಯರಾಗಿ ಮನುಷ್ಯರಿಗೆ ಸಹಾಯ ಮಾಡುವುದು ನಮ್ಮ ಧರ್ಮ.
ಇದರಲ್ಲಿ ಹೆಚ್ಚೇನೂ ಇಲ್ಲ ಎಂದು ಹೇಳುವ ಮೂಲಕ ತನ್ನ ಸರಳತೆ ಮತ್ತು ಮಾನವೀಯ ಪ್ರಜ್ಞೆಯನ್ನು ಮೆರೆದಿದ್ದಾರೆ.
ಭಾಗ್ಯಶ್ರೀ ಅವರ ಈ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ.
ಆ್ಯಂಬುಲೆನ್ಸ್ ದರ್ಪ : ಬಸವಳಿದು ರಸ್ತೆ ಬದಿ ಅಸಾಯಕನಾಗಿ ಕುಸಿದು ಬಿದ್ದ ಆ ವೃದ್ದನ್ನು ಆಸ್ಪತ್ರೆಗೆ ದಾಖಲು ಮಾಡಲು 108 ನ ಸಿಬಂದಿ ನಿರಾಕರಿಸಿದ ವಿದ್ಯಮಾನವು ನಡೆಯಿತು.
ವೃದ್ದನನ್ನು ಆಸ್ಪತ್ರೆಗೆ ಕರೆದೊಯ್ಯಲು 108 ಆಂಬುಲೆನ್ಸ್ ಕರೆ ಮಾಡಿ ಸ್ಥಳಕ್ಕೆ ಕರೆಯಿಸಲಾಗಿತ್ತು.
ಆದರೆ ಸಿಬ್ಬಂದಿ ಅವರನ್ನು ಕೊಂಡೊಯ್ಯಲು ನಿರಾಕರಿಸಿದರು. ಬಳಿಕ ಪೊಲೀಸ್ ಮನವೊಲಿಕೆಯ ಮೇರೆಗೆ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತು.