SULLIA
‘ಯೋಚನೆರಹಿತ ಯೋಜನೆ ದುಂದುವೆಚ್ಚ’
ಸುಳ್ಯ: ಸರಿಯಾದ ಯೋಚನೆಗಳು ಇಲ್ಲದೆ ಸರ್ಕಾರದ ಅನೇಕ ಯೋಜನೆ ಗಳು ದುಂದು ವೆಚ್ಚಗಳಾಗುತ್ತಿವೆ. ಎಲ್ಲಿಯೋ ಕುಳಿತು ಯೋಜನೆ ರೂಪಿಸಿದರೆ ಕಾಮಗಾರಿ ಬಾಳಿಕೆ ಬರುವುದಿಲ್ಲ. ಸರ್ಕಾರದೊಂದಿಗೆ ಸ್ಥಳೀಯ ಜನರೂ ಸಹಕಾರ ನೀಡಬೇಕು. ಜನಪ್ರತಿನಿಧಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಎಸ್.ಅಂಗಾರ ಹೇಳಿದರು.
ಮಂಡೆಕೋಲು ಗ್ರಾಮದಲ್ಲಿ ಇತ್ತೀಚೆಗೆ ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟಿಸಿದ ಬಳಿಕ ಪೇರಾಲು ಭಜನಾ ಮಂದಿರದಲ್ಲಿ ನಡೆದ ಸಭಾ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು. ಕಾಂತಮಂಗಲದಿಂದ ಅಜ್ಜಾವರದವರೆಗೆ ರಸ್ತೆ ಡಾಂಬರೀಕರಣ ನಡೆಯಲಿದ್ದು, ಕಾಂತಮಂಗಲ ಸೇತುವೆ ಶಿಥಿಲವಾಗಿದೆ. ಹೊಸ ಸೇತುವೆ ನಿರ್ಮಾಣ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಮುರೂರು ಬಸ್ ತಂಗುದಾಣ, ಕೇನಾಜೆ ರಸ್ತೆ ಡಾಂಬರೀಕರಣ ಹಾಗೂ ಪೇರಾಲು ಅಂಗನವಾಡಿ ಕಟ್ಟಡಗಳನ್ನು ಉದ್ಘಾಟಿಸಿದರು. ಮಂಡೆಕೋಲು ಗ್ರಾಮ ಪಂಚಾಯತಿ ಅಧ್ಯಕ್ಷೆ ಮೋಹಿನಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷ ಜಯರಾಜ್ ಕುಕ್ಕೇಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.