Connect with us

DAKSHINA KANNADA

ಮೊಬೈಲ್ ಗಳ ಗುಲಾಮರಾಗುವ ಬದಲು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಕೆಲಸ ಮಾಡಿ -ವಿಜ್ಞಾನಿ ಡಾ. ಟಿ.ವಿ. ರಾಮಚಂದ್ರ

ಮೊಬೈಲ್ ಗಳ ಗುಲಾಮರಾಗುವ ಬದಲು ವಿಜ್ಞಾನ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಕೆಲಸ ಮಾಡಿ -ವಿಜ್ಞಾನಿ ಡಾ. ಟಿ.ವಿ. ರಾಮಚಂದ್ರ

ಮೂಡುಬಿದಿರೆ, ಅಕ್ಟೋಬರ್ 15: `ದೇಶದ ಅಭಿವೃದ್ಧಿ ಬಗ್ಗೆ ಮಾತನಾಡಿದರೆ ಸಾಲದು; ಬದಲಾಗಿ ದೇಶ ಕಟ್ಟುವ, ಬೆಳೆಸುವ ತನ್ಮೂಲಕ ಅಭಿವೃದ್ಧಿ ಸಾಧಿಸುವ ಛಲವಿರಬೇಕು. ಸಮರ್ಪಣಾ ಮನೋಭಾವದಿಂದ ನಮ್ಮನ್ನು ನಾವು ಸಕಾರಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಂಡರೆ ದೇಶದ ಅಭಿವೃದ್ಧಿ ಖಂಡಿತವಾಗಿಯೂ ಸಾಧ್ಯ. ತಂತ್ರಜ್ಞಾನದ ಅನ್ವಯವಾಗಿರುವ ಮೊಬೈಲ್, ಕಂಪ್ಯೂಟರ್‍ಗಳ ಗುಲಾಮರಾಗುವ ಬದಲು ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ಕೆಲಸ ಮಾಡುವಂತಾಗಬೇಕು. ಆಗ ವಿಜ್ಞಾನದಿಂದ ದೇಶವನ್ನು ಬೆಳೆಸಬಹುದು’ ಎಂದು ವಿಜ್ಞಾನಿ ಡಾ. ಟಿ.ವಿ. ರಾಮಚಂದ್ರ ಹೇಳಿದರು.

ಆಳ್ವಾಸ್ ಕಾಲೇಜು ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಯ ಸೆಂಟರ್ ಫಾರ್ ಇಕಾಲಾಜಿಕಲ್ ಸೈನ್ಸಸ್ ಆಶ್ರಯದಲ್ಲಿ ನಡೆದ `ಸಂಶೋಧನೆ ಮತ್ತು ಅಭಿವೃದ್ಧಿಯ ಅಗತ್ಯತೆ’ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಸಂಶೋಧನಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಸೆಂಟರ್ ಫಾರ್ ಇಕಾಲಾಜಿಕಲ್ ಸೈನ್ಸಸ್ ಮೂರು ಒಡಂಬಡಿಕೆಗಳಿಗೆ ಸಹಿ ಹಾಕಿದವು.

ಭಾರತ ಸರಕಾರವು ಗ್ರೀನ್ ಸ್ಕಿಲ್ ಡೆವಲಪ್‍ಮೆಂಟ್ ಎಂಬ ಯೋಜನೆಯನ್ನು ಜಾರಿಗೊಳಿಸುತ್ತಿದ್ದು ವಿವಿಧ ಕ್ಷೇತ್ರಗಳಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಸಂಶೋಧಿಸುವ ಕಾರ್ಯ ನಡೆಯಲಿದೆ. ಈ ಯೋಜನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಜನರು ಪಾಲ್ಗೊಳ್ಳಬೇಕು. ಯುವಶಕ್ತಿಯು ಇಂತಹ ಸಂಶೋಧನಾತ್ಮಕ ಕ್ಷೇತ್ರಗಳಲ್ಲಿ ತಮ್ಮ ಜ್ಞಾನವನ್ನು ಸದ್ವಿನಿಯೋಗಗೊಳಿಸಿದರೆ ದೇಶಕ್ಕೆ ಹೆಚ್ಚಿನ ಲಾಭವಾಗುತ್ತದೆ. ಅವೈಜ್ಞಾನಿಕ ಆಲೋಚನೆ, ಕಾರ್ಯವಿಧಾನಗಳನ್ನು ಒಪ್ಪಿಕೊಳ್ಳುವುದು ಹೆಚ್ಚಿನ ಅನಾಹುತಗಳಿಗೆ ದಾರಿ ಮಾಡಿಕೊಡುತ್ತದೆ. ಆದ್ದರಿಂದ ಜನರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದು ಇಂದಿನ ಅಗತ್ಯ ಎಂದು ಡಾ. ಟಿ.ವಿ. ರಾಮಚಂದ್ರ ಅಭಿಪ್ರಾಯಪಟ್ಟರು.

ಉದ್ಯೋಗ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇಂದಿನ ವಿದ್ಯಾರ್ಥಿಗಳ ಮನೋಭಾವವನ್ನು ವಿಶ್ಲೇಷಿಸಿದ ಅವರು, ಸರಕಾರಿ ಉದ್ಯೋಗ ಹಾಗೂ ಕಾರ್ಪೋರೇಟ್ ಉದ್ಯಮಗಳಿಗಾಗಿಯೇ ಚಿಂತೆ ಮಾಡುವ ಮನಸ್ಥಿತಿಯನ್ನು ಬಿಟ್ಟು ಸಂಶೋಧನಾತ್ಮಕ ಕ್ಷೇತ್ರದತ್ತ ಹೆಚ್ಚಿನ ಒಲವನ್ನು ಅವರು ತೋರಿಸಬೇಕಿದೆ. ತನ್ಮೂಲಕ ತಾವೇ ಹೊಸ ಉದ್ಯೋಗಗಳನ್ನು ಸೃಷ್ಟಿಸಿ ಇತರರ ಬದುಕಿಗೆ ದಾರಿ ದೀಪವಾಗಬೇಕಿದೆ. ಇದರಿಂದ ಸಮಷ್ಟಿ ಬೆಳವಣಿಗೆ, ಅಭಿವೃದ್ಧಿ ಸಾಧ್ಯ ಎಂದರು.

ಸಂಸ್ಥೆಯ ಇತಿಹಾಸದಲ್ಲಿ ಹಾಗೂ ವೈಯಕ್ತಿಕ ಹಿನ್ನಲೆಯಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಜೊತೆಗಿನ ಒಡಂಬಡಿಕೆ ಐತಿಹಾಸಿಕ ಒಡಂಬಡಿಕೆಯಾಗಿದ್ದು, ಇದನ್ನು ದೇವರು ಕೊಟ್ಟ ಭಾಗ್ಯ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮುಖ್ಯಸ್ಥ ಡಾ ಮೋಹನ್ ಆಳ್ವ ತಿಳಿಸಿದರು. ಪ್ರಪಂಚದಲ್ಲಿ ಭಾರತೀಯ ವಿಜ್ಞಾನ ಸಂಸೆಯು ಸಂಶೋಧನಾ ಕ್ಷೇತ್ರದಲ್ಲಿ ಉನ್ನತ ಸ್ಥಾನದಲ್ಲಿದ್ದು, ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿಯನ್ನು ಬೆಳಸುವುದು, ಸಂಶೋಧನೆಯಲ್ಲಿ ತೊಡಗಿಸುವುದರಲ್ಲಿ ಮುಂಚೂಣಿಯಲ್ಲಿದೆ.

ಸಮಾಜದಲ್ಲಿರುವ ಹತ್ತಾರು ಸಮಸ್ಯೆಗಳಿಗೆ ವಿಜ್ಞಾನ ಹಾಗೂ ತಂತ್ರಜ್ಞಾನದ ಮೂಲಕ ಪರಿಹಾರವನ್ನು ಸೂಚಿಸುವ ಕೆಲಸ ಭಾರತೀಯ ವಿಜ್ಞಾನ ಸಂಸ್ಥೆ ಮಾಡುತ್ತಿದೆ ಎಂದರು. ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿನ ವಿಜ್ಞಾನಿಗಳ ಮನೋಧರ್ಮ, ಪರಿಕಲ್ಪನೆ, ವಿದ್ಯಾರ್ಥಿಗಳ ಮೇಲೆ ಇರುವ ಭರವಸೆ ಶ್ಲಾಘನೀಯ ಎಂದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *