DAKSHINA KANNADA
ಮಾನವಿಯತೆ ಮೆರೆದ ಪೋಲಿಸ್ ಕಾನ್ಸ್ಟೇಬಲ್ ರವಿ
ಮಂಗಳೂರು,ಎಪ್ರಿಲ್ 13 : ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದ ಗರ್ಭಿಣಿಯೊಬ್ಬರು ಪೊಲೀಸ್ ಹೆಡ್ ಕಾನ್ಸ್ಟೇಬಲ್ ಕಾರಿನಲ್ಲೇ ಮಗುವಿಗೆ ಜನ್ಮವಿತ್ತ ಪ್ರಸಂಗ ಗುರುವಾರ ಮಂಗಳೂರಿನಲ್ಲಿ ನಗರದಲ್ಲಿ ನಡೆದಿದೆ.
ತೊಕ್ಕೊಟ್ಟು ಸಮೀಪದ ಕೋಟೆಕಾರು ಬೀರಿ ನಿವಾಸಿ, ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ರವಿ ಮಾನವೀಯತೆ ಮೆರೆತವರು.
ಅವರು ಗುರುವಾರ ಬೆಳಗ್ಗೆ ಸುಮಾರು 7:30ರ ವೇಳೆಗೆ ಕಾರಿನಲ್ಲಿ ತನ್ನ ಮಕ್ಕಳನ್ನು ಎಕ್ಕೂರಿನಲ್ಲಿರುವ ಕೇಂದ್ರೀಯ ವಿದ್ಯಾಲಯಕ್ಕೆ ಕರೆದುಕೊಂಡು ಬರುತ್ತಿದ್ದರು.
ರವಿಯವರು ಕಾರನ್ನು ಎಕ್ಕೂರು ಕೇಂದ್ರೀಯ ವಿದ್ಯಾಲಯದ ಎದುರು ನಿಲ್ಲಿಸುತ್ತಿದ್ದಂತೆ ರಿಕ್ಷಾವೊಂದರಲ್ಲಿದ್ದ ನೌಷಾದ್ ಎಂಬವರು ಓಡಿ ಬಂದು ‘ರಿಕ್ಷಾದಲ್ಲಿ ಗರ್ಭೀಣಿಯೊಬ್ಬರು ನೋವಿನಿಂದ ಒದ್ದಾಡುತ್ತಿದ್ದಾರೆ.
ದಯವಿಟ್ಟು ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ’ ಎಂದು ವಿನಂತಿಸಿದರು.
ಅಪಾಯವನ್ನು ಅರಿತ ರವಿಯವರು ತಕ್ಷಣ ಸ್ಪಂದಿಸಿ ಮಹಿಳೆಯನ್ನು ತನ್ನ ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಆದರೆ ಪಂಪುವೆಲ್ ಜಂಕ್ಷನ್ ತಲುಪುತ್ತಿದ್ದಂತೆ ಉಳ್ಳಾಲದ ಗರ್ಭಿಣಿಯು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಬಳಿಕ ರವಿಯವರು ತಾಯಿ ಮತ್ತು ಮಗುವನ್ನು ನೇರ ಕಂಕನಾಡಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು ಎಂದು ತಿಳಿದು ಬಂದಿದೆ.