DAKSHINA KANNADA
ಮಸೀದಿಗೆ ಜಾಗ ನೀಡಿ ಮತೀಯ ಸೌಹರ್ದತೆ ಮೆರೆದ ದೇವಸ್ಥಾನದ ಅಧ್ಯಕ್ಷ
ಮಸೀದಿಗೆ ಜಾಗ ನೀಡಿ ಮತೀಯ ಸೌಹರ್ದತೆ ಮೆರೆದ ದೇವಸ್ಥಾನದ ಅಧ್ಯಕ್ಷ
ಪುತ್ತೂರು.ಡಿಸೆಂಬರ್ 16 : ಕರಾವಳಿಯ ಭಾಗ ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆ ಕೋಮು ಗಲಭೆ, ಮತೀಯ ಸಂಘರ್ಷಗಳಿಗೆ ದೇಶದಲ್ಲೇ ಕುಖ್ಯಾತಿ ಪಡೆದಿದೆ.
ಸದಾ ಕೋಮು ಸಂಘರ್ಷಗಳ ಸುದ್ದಿಗಳಲ್ಲೇ ಇರುವ ದಕ್ಷಿಣ ಕನ್ನಡ ಕೋಮು ಸೌಹರ್ದತೆಯ ವಿದ್ಯಮಾನಗಳೂ ನಡೆಯುತ್ತವೆ.
ಅದರೆ ಸುದ್ದಿಯಾಗುವುದು ಅಪರೂಪ. ಇಂತಹ ಒಂದು ಮತೀಯ ಸೌಹರ್ದತೆಯ ಅಪರೂಪದ ವಿದ್ಯಮಾನ ದಕ್ಷಿಣ ಕನ್ನಡ ಪುತ್ತೂರು ತಾಲೂಕಿನ ಕೆಯ್ಯೂರಿನಲ್ಲಿ ನಡೆದಿದೆ.
ಮುಸ್ಲೀಂ ಬಂಧುಗಳಿಗೆ ಮಸೀದಿ ಕಟ್ಟಲು ದೇವಸ್ಥಾನದ ಅಧ್ಯಕ್ಷ ತನ್ನ ಭೂಮಿಯನ್ನು ದಾನವಾಗಿ ನೀಡಿದ್ದಾರೆ.
ಓಲೆಮುಂಡೋವು ನಿವಾಸಿ ಪ್ರಗತಿಪರ ಕೃಷಿಕ ಹಾಗೂ ಇಲ್ಲಿಯ ವಿಷ್ಣುಮೂರ್ತಿ ದೇವಾಲಯದ ಅಧ್ಯಕ್ಷ ಮೋಹನ್ ರೈ ತಮ್ಮ ಭೂಮಿಯನ್ನು ಮಸೀದಿ ನಿರ್ಮಿಸಲು ದಾನವಾಗಿ ನೀಡಿದ್ದಾರೆ.
ಮೋಹನ್ ರೈ ಅವರ ಒಡೆತನದ ಕೃಷಿ ಭೂಮಿಗೆ ತಾಗಿಕೊಂಡೇ ಓಲೆಮುಂಡೋವು ಐತಿಹಾಸಿಕ ದರ್ಗಾ ಹಾಗೂ ಮಸೀದಿ ಇದೆ.
ದರ್ಗಾ ಕಟ್ಟಡ ವಿಸ್ತರಿಸಲು ಸ್ಥಳಾವಕಾಶದ ಕೊರತೆ ಮಸೀದಿಯ ಆಡಳಿತ ಮಂಡಳಿಗೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಮಸೀದಿ ಸಮಿತಿಯ ಪ್ರಮುಖರು ಮೋಹನ್ ರೈ ಅವರಲ್ಲಿ ಜಾಗ ನೀಡುವಂತೆ ಕೇಳಿಕೊಂಡಿದ್ದರು.
ಈ ನಿಟ್ಟಿನಲ್ಲಿ ಮಸೀದಿಯ ಅಧ್ಯಕ್ಷ ಹಾಜಿ ಪುತ್ತುಮೋನು ಮತ್ತಿತರ ಮುಖಂಡರನ್ನು ಭೇಟಿ ಮಾಡಿ ಭೂಮಿ ನೀಡುವುದಾಗಿ ಮೋಹನ್ ರೈ ವಾಗ್ದಾನ ಮಾಡಿದ್ದರು.
ಈ ವಾಗ್ದಾನ ಪ್ರಕಾರ ಮೋಹನ್ ರೈ ತಮ್ಮ ಸ್ವಾಧೀನದಲ್ಲಿರುವ 12 ಸೆಂಟ್ಸ್ ಜಾಗವನ್ನು ಮಸೀದಿಗೆ ದಾನವಾಗಿ ನೀಡಿದ್ದಾರೆ.
ಈ ಮೂಲಕ ಸದಾ ಕೋಮು ಸಂಘರ್ಷಗಳಲ್ಲೇ ಸುದ್ದಿಯಾಗುತ್ತಿರುವ ಈ ಜಿಲ್ಲೆಯಲ್ಲಿ ಕೋಮು ಸೌಹಾರ್ದ ಕೂಡ ಇದೆ ಎಂಬುದನ್ನು ಮೋಹನ್ ರೈ ಮಾತಿನಲ್ಲಿ ಮಾತ್ರವಲ್ಲ ಕೃತಿಯಲ್ಲೂ ತೋರಿಸಿಕೊಟ್ಟಿದ್ದಾರೆ.
ಮೋಹನ್ ರೈ ಅವರ ಕೋಮು ಸೌಹರ್ದ ನಡೆಗೆ ಎಲ್ಲೆಡೆ ಪ್ರಸಂಸೆ ವ್ಯಕ್ತವಾಗಿದೆ.