DAKSHINA KANNADA
ಪೂರಕ ಸಾಕ್ಷಾಧಾರದ ಕೊರತೆ, ರಾಜೇಶ್ ಪೂಜಾರಿ ಕೊಲೆ ಆರೋಪಿಗಳು ಬಂಧಮುಕ್ತ

ಪೂರಕ ಸಾಕ್ಷಾಧಾರದ ಕೊರತೆ, ರಾಜೇಶ್ ಪೂಜಾರಿ ಕೊಲೆ ಆರೋಪಿಗಳು ಬಂಧಮುಕ್ತ
ಮಂಗಳೂರು, ಮಾರ್ಚ್ 24: ಭಜರಂಗದಳ ಮುಖಂಡ ರಾಜೇಶ್ ಪೂಜಾರಿ ಕೊಲೆ ಆರೋಪದಲ್ಲಿ ಬಂಧಿತರಾಗಿದ್ದ ಬಂಟ್ವಾಳದ ಮೂವರು ಆರೋಪಿಗಳನ್ನು ಮೂರನೇ ಜಿಲ್ಲಾ ಮತ್ತು ಹೆಚ್ಚುವರಿ ನ್ಯಾಯಾಲಯ ಖುಲಾಸೆಗೊಳಿಸಿದೆ.
ಮಾರ್ಚ್ 21 , 2014 ರಲ್ಲಿ ಬೆಂಜನಪದವು ಎಂಬಲ್ಲಿ ಅಟೋ ರಿಕ್ಷಾ ಚಾಲಕನಾದ ರಾಜೇಶ್ ಪೂಜಾರಿಯನ್ನು ಬೆಳಿಗ್ಗೆ ಸುಮಾರು 7 ಗಂಟೆಗೆ ಮಚ್ಚು ಹಾಗೂ ತಲವಾರಿನಿಂದ ದುಷ್ಕರ್ಮಿಗಳು ಕಡಿದು ಕೊಲೆ ಮಾಡಿದ್ದರು.

ಕೊಲೆ ಮಾಡಿದ ದುಷ್ಕರ್ಮಿಗಳು ಯಾರೆಂದು ಗುರುತಿಸಲಾರದ ಕಾರಣ ಬಂಟ್ವಾಳ ಪೋಲೀಸರು ಆರೋಪಿಗಳನ್ನು ಬಂಧಿಸಲು ಬಲೆ ಬೀಸಿದ್ದರು.
ಈ ಸಂಬಂಧ ಪೋಲೀಸರು ಬಂಟ್ವಾಳದ ನಿವಾಸಿಗಳಾದ ಇಮ್ರಾನ್, ಇರ್ಷಾದ್ ಮತ್ತು ಹುಸೈನ್ ಎಂಬವರನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಪ್ರಾಸಿಕ್ಯೂಶನ್ ಈ ಸಂಬಂಧ ಆರೋಪಿಗಳ ವಿರುದ್ಧ 24 ಸಾಕ್ಷಿದಾರರನ್ನು ಹಾಜರುಪಡಿಸಿತ್ತು.
ಅಲ್ಲದೆ 47 ದಾಖಲೆಗಳನ್ನೂ ನ್ಯಾಯಾಲಯಕ್ಕೆ ನೀಡಿತ್ತು ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೂರಕ ಸಾಂದರ್ಭಿಕ ಸಾಕ್ಷಿ ಸಲ್ಲಿಸದ ಹಿನ್ನಲೆಯಲ್ಲಿ ನ್ಯಾಯಾಲಯ ಮೂವರನ್ನೂ ನಿರ್ದೋಷಿಗಳೆಂದು ಬಿಡುಗಡೆ ಮಾಡಿದೆ.
ರಾಜೇಶ್ ಪೂಜಾರಿ ಇಬ್ರಾನ್ ಎನ್ನುವಾತನ ಕೊಲೆಯ ಆರೋಪಿ ಸ್ಥಾನದಲ್ಲಿದ್ದು, ಕೊಲೆಯಾಗುವ ಕೆಲವೇ ದಿನಗಳ ಹಿಂದೆ ಜೈಲಿನಿಂದ ಬಿಡುಗಡೆಯಾಗಿದ್ದ.
ರಾಜೇಶ್ ಪೂಜಾರಿ ಕೊಲೆ ಆರೋಪಿಗಳೆಂದು ಪೋಲೀಸರು ವಶಕ್ಕೆ ಪಡೆದಿರುವ ಇಬ್ರಾನ್, ಇರ್ಷಾದ್ ಹಾಗೂ ಹುಸೈನ್ ನಿರ್ದೋಷಿಗಳೆಂದು ಡಿವೈಎಫ್ಐ ನಿರಂತರವಾಗಿ ವಾದಿಸುವ ಮೂಲಕ ಮೂವರನ್ನೂ ಬಿಡುಗಡೆ ಮಾಡಲು ಪ್ರತಿಭಟನೆಯನ್ನು ನಡೆಸಿತ್ತು.