DAKSHINA KANNADA
ಪುತ್ತೂರಿನಲ್ಲಿ ಇಂದು ರಸ್ತೆಯೇ ಸಂತೆ
ಪುತ್ತೂರು,ಆಗಸ್ಟ್ 21 : ರಾಜ್ಯದಲ್ಲಿ ಹೆಸರುವಾಸಿಯಾಗಿರುವ ಸಂತೆಗಳಲ್ಲಿ ಪುತ್ತೂರು ಸಂತೆಯೂ ಒಂದಾಗಿದ್ದು, ಪುತ್ತೂರಿನಲ್ಲಿ ಸೋಮವಾರ ದಿನ ಈ ಸಂತೆಯನ್ನು ನಡೆಸಲಾಗುತ್ತದೆ. ಪುತ್ತೂರಿನ ನಗರ ಮಧ್ಯೆ ಇರುವಂತಹ ಕಿಲ್ಲೆ ಮೈದಾನದಲ್ಲಿ ಇತ್ತೀಚಿನ ದಿನಗಳಲ್ಲಿ ಸಂತೆಯನ್ನು ನಡೆಸಲಾಗುತ್ತಿದ್ದು, ಇಂದು ಮಾತ್ರ ಕಿಲ್ಲೆ ಮೈದಾನದಿಂದ ಸಂತೆ ಸೀದಾ ರಸ್ತೆಗೆ ಶಿಫ್ಟ್ ಆಗಿದೆ. ಕಿಲ್ಲೆ ಮೈದಾನದಲ್ಲಿ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮ ನಡೆಯುವ ಹಿನ್ನಲೆಯಲ್ಲಿ ಮೈದಾನ ತುಂಬಾ ಪೆಂಡಾಲ್ ಹಾಕಲಾಗಿದ್ದು, ಸಂತೆಗಾಗಿ ಮೀಸಲಿದ್ದ ಮೈದಾನದಲ್ಲಿ ನೀರು ತುಂಬಿದ ಹಿನ್ನಲೆಯಲ್ಲಿ ಸಂತೆಗೆ ಸ್ಥಳಾವಕಾಶದ ಕೊರತೆಯಿದ್ದ ಕಾರಣ ಬಹುತೇಕ ಎಲ್ಲಾ ಅಂಗಡಿಗಳು ರಸ್ತೆಯಲ್ಲೇ ತೆರೆದಿದ್ದವು. ಸರಕಾರಿ ಆಸ್ಪತ್ರೆ, ಮಿನಿ ವಿಧಾನಸೌಧ, ನ್ಯಾಯಾಲಯ ಹೀಗೆ ಹಲವು ಪ್ರಮುಖ ಸರಕಾರಿ ಕಛೇರಿಗಳಿರುವ ಈ ರಸ್ತೆಯು ಇಂದು ಅಕ್ಷರಶ ಗೊಜಲುಮಯವಾಗಿತ್ತು. ಪ್ರತಿ ವರ್ಷವೂ ಗಣೇಶೋತ್ಸವ ಸಂದರ್ಭದಲ್ಲಿ ಕಿಲ್ಲೆ ಮೈದಾನದ ಒಂದು ಭಾಗದಲ್ಲಿ ಸಂತೆ ನಡೆಯುತ್ತಿತ್ತಾದರೂ, ಈ ಬಾರಿ ಮಾತ್ರ ಸಂತೆಯನ್ನು ರಸ್ತೆಗೇ ಎಳೆದು ತರಲಾಗಿದೆ. ಈ ಹಿಂದೆ ರಸ್ತೆಯ ಇಕ್ಕೆಲಗಳಲ್ಲಿ ವ್ಯಾಪಾರ ನಡೆಯುತ್ತಿದ್ದ ಕಾರಣ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಹಾಗೂ ಆಸ್ಪತ್ರೆಗೆ ರೋಗಿಗಳನ್ನು ಸಾಗಿಸುವ ಅಂಬ್ಯುಲೆನ್ಸ್ ಸಂಚಾರಕ್ಕೆ ಭಾರೀ ತೊಂದರೆಯಾದ ಹಿನ್ನಲೆಯಲ್ಲಿ ಆಗಿನ ಪುತ್ತೂರು ಸಹಾಯಕ ಕಮಿಷನರ್ ಡಾ.ಕೆ.ವಿ.ರಾಜೇಂದ್ರ ಸಂತೆಯನ್ನು ಸುಸಜ್ಜಿತವಾದ ಎ.ಪಿ.ಎಂ.ಸಿ ಯಾರ್ಡ್ ಗೆ ಶಿಫ್ಟ್ ಮಾಡಿದ್ದರು. ಆದರೆ ಈ ಆದೇಶಕ್ಕೆ ಕೆಲವು ಪುತ್ತೂರು ನಗರಸಭೆಯ ಸದಸ್ಯರು ಹಾಗೂ ವ್ಯಾಪಾರಿಗಳ ಭಾರೀ ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಡಾ.ಕೆ.ವಿ.ರಾಜೇಂದ್ರ ವರ್ಗಾವಣೆಯಾಗಿ ಹೋದ ಬೆನ್ನಲ್ಲೇ ಸಂತೆಯೂ ಮತ್ತೆ ಕಿಲ್ಲೆ ಮೈದಾನಕ್ಕೆ ಶಿಫ್ಟ್ ಆಗಿದ್ದದನ್ನು ಇಲ್ಲಿ ಜ್ಞಾಪಿಸಬೇಕಿದೆ. ಕಿಲ್ಲೆ ಮೈದಾನದಲ್ಲಿ ಸಂತೆ ನಡೆಯುತ್ತಿದ್ದ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿ ನಡೆಯುತ್ತಿದ್ದ ವ್ಯಾಪಾರ ಮಾತ್ರ ಇಂದು ಅಕ್ಷರಶ ರಸ್ತೆಯ ಮಧ್ಯದಲ್ಲೇ ನಡೆಯಿತು. ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ, ವಿದ್ಯಾರ್ಥಿಗಳಿಗೆ ಹಾಗೂ ರೋಗಿಗಳಿಗೆ ಇದರಿಂದ ಭಾರೀ ತೊಂದರೆ ಅನುಭವಿಸಬೇಕಾಯಿತು.