Connect with us

    LATEST NEWS

    ಪರಸತಿ ಪ್ರಸಂಗ ಕೌಟುಂಬಿಕ ದೌರ್ಜನ್ಯ : ಹೈಕೋರ್ಟ್ ಮಹತ್ವದ ತೀರ್ಪು

    ಬೆಂಗಳೂರು , ಅಗಸ್ಟ್ 16 : ಮೊದಲನೇ ಹೆಂಡತಿ ಜತೆ ಕಾನೂನು ಬದ್ಧವಾಗಿ ವೈವಾಹಿಕ ಸಂಬಂಧ ಕಳೆದುಕೊಳ್ಳದೇ, ಬೇರೊಬ್ಬ ಮಹಿಳೆ ಜತೆಗೆ ವೈವಾಹಿಕ ತರಹದ ಜೀವನ ನಡೆಸುವುದು ಮೊದಲ ಪತ್ನಿಗೆ ಕೌಟುಂಬಿಕ ದೌರ್ಜನ್ಯ ನೀಡಿದಂತೆಯೇ ಆಗಲಿದೆ ಎಂದು ರಾಜ್ಯ ಉಚ್ಚ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.ಈ ಸಂಬಂಧ ಗಂಡನಿಂದ ಮೂರು ದಶಕಗಳ ಕಾಲ ದೂರವಾಗಿದ್ದ  ಸಂತ್ರಸ್ತ ಮಹಿಳೆಗೆ ನ್ಯಾಯ ಒದಗಿಸಿ ಜೀವನಾಂಶ ಮತ್ತು ಪರಿಹಾರ ನೀಡಲು ಆದೇಶಿಸಿದೆ. ಮೌಖೀಕವಾಗಿ ವೈವಾಹಿಕ ಜೀವನದಿಂದ ದೂರವಾದ ಬಳಿಕ ನಿಗದಿತ ಅವಧಿಯಲ್ಲಿ ಜೀವನಾಂಶ ಕೋರಿಲ್ಲ ಎಂದು ಮೊದಲ ಪತ್ನಿಗೆ ಜೀವನಾಂಶ ನೀಡಲು ನಿರಾಕರಿಸಿದ್ದ ನಿವೃತ್ತ ಸರ್ಕಾರಿ ಅಧಿಕಾರಿಯೊಬ್ಬರಿಗೆ ಹೈಕೋರ್ಟ್‌ ಕೌಟುಂಬಿಕ ದೌರ್ಜನ್ಯ ಕಾಯ್ದೆ ಬಿಸಿ ಮುಟ್ಟಿಸಿದ್ದು, ಮೊದಲ ಪತ್ನಿಗೆ ಜೀವನಾಂಶ ಹಾಗೂ ಪರಿಹಾರ ಕೊಡುವಂತೆ ತೀರ್ಪು ನೀಡಿದ್ದ ಅಧೀನ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದೆ.ಅಧೀನ ನ್ಯಾಯಾಲಯದ ಆದೇಶ ರದ್ದುಪಡಿಸುವಂತೆ ನಿವೃತ್ತ ಸರ್ಕಾರಿ ಅಧಿಕಾರಿ ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿ ಅರ್ಜಿಯನ್ನು ಇತ್ತೀಚೆಗೆ ವಜಾಗೊಳಿಸಿರುವ ನ್ಯಾ. ರತ್ನಕಲಾ ಅವರಿದ್ದ ಏಕಸದಸ್ಯ ಪೀಠ, ವ್ಯಕ್ತಿಯೊಬ್ಬ ಮೊದಲನೇ ಪತ್ನಿಯನ್ನು ಕಡೆಗಣಿಸಿ, ಬೇರೆ ಮಹಿಳೆ (ಎರಡನೇ ಪತ್ನಿ) ಜೊತೆ ವಾಸಿಸುವುದೂ ಕೌಟುಂಬಿಕ ದೌರ್ಜನ್ಯ ಆಗಲಿದೆ. ಜೊತೆಗೆ ನಿಗದಿತ ಅವಧಿಯಲ್ಲಿ ಪತ್ನಿ ಜೀವನಾಂಶ ಕೋರಿಲ್ಲ ಎಂಬ ಕಾರಣವನ್ನಿಟ್ಟುಕೊಂಡು, ಜೀವನಾಂಶ ಮತ್ತು ಪರಿಹಾರ ನೀಡುವ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲವೆಂದು ತೀರ್ಪಿನಲ್ಲಿ ತಿಳಿಸಿದೆ.ಹೈಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಪತಿಯಿಂದ ಪರಿತ್ಯಕ್ತಗೊಂಡ 30 ವರ್ಷಗಳ ಬಳಿಕ ಜೀವನಾಂಶ ಕೋರಿದ್ದ ಮಹಿಳೆಯೊಬ್ಬರು, ಪತಿಯಿಂದ ಮಾಸಿಕ 5000 ರೂ. ಜೀವನಾಂಶ ಹಾಗೂ 50 ಸಾವಿರ ರೂ. ಪರಿಹಾರ ಪಡೆಯುವಲ್ಲಿ ಸಫ‌ಲರಾಗಿದ್ದಾರೆ. ಮೊದಲ ಪತ್ನಿಯನ್ನು ಕಡೆಗಣಿಸಿ ಎರಡನೇ ವಿವಾಹವಾದ ಬಳಿಕ ಮೊದಲ ಪತ್ನಿಗೆ ಸೂಕ್ತ ಪರಿಹಾರ ಒದಗಿಸಿಲ್ಲ. ತನ್ನ ಸೇವಾವಧಿಯ ದಾಖಲೆಗಳಲ್ಲಿ ಮೊದಲ ಪತ್ನಿ ಬದುಕಿರುವಾಗಲೇ, ಕಾನೂನು ಬದ್ಧವಾಗಿ ವಿಚ್ಛೇದನ ಪಡೆಯದೆ ಎರಡನೇ ಪತ್ನಿಯ ಹೆಸರನ್ನು ಉಲ್ಲೇಖೀಸಿದ್ದಾರೆ. ಇದು ಕೂಡ ಕೌಟುಂಬಿಕ ದೌರ್ಜನ್ಯ ಕಾಯ್ದೆ ಸೆಕ್ಷನ್‌ (3)ರ ಅಡಿಯಲ್ಲಿ ಆರ್ಥಿಕ ನಿಂದನೆಯಾಗಲಿದೆ. ಅಲ್ಲದೆ ಎರಡನೇ ಪತ್ನಿ ಹಾಗೂ ಮಕ್ಕಳ ಜೊತೆ ಆರಾಮದಾಯಕ ಜೀವನ ನಡೆಸುತ್ತಿರುವುದು ಸೆಕ್ಷನ್‌ 3(ಎ) ಅನ್ವಯ ಭಾವನಾತ್ಮಕ ನಿಂದನೆಯೂ ಆಗಲಿದೆ. ಮಹಿಳೆಯ ಜೀವನ ಕೊನೆಗಾಲದಲ್ಲಿ ಮಾನಸಿಕ ಹಾಗೂ ದೈಹಿಕ ಘಾಸಿಗೊಳಗಾಗುವಂತೆ ಮಾಡಲಿದೆ. ಇದು ಕೌಟುಂಬಿಕ ದೌರ್ಜನ್ಯದ ಮತ್ತೂಂದು ಸ್ವರೂಪ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.ಈ ಅಂಶಗಳ ಆಧಾರದಲ್ಲಿ ಅರ್ಜಿದಾರ ತಪ್ಪಿತಸ್ಥ ಎಂದು ಪರಿಗಣಿತನಾಗುತ್ತಾನೆ. ಅಲ್ಲದೆ ನಿಗದಿತ ಕಾಲಮಿತಿಯಲ್ಲಿ ಜೀವನಾಂಶ ಕೋರಿಲ್ಲ ಹಾಗೂ ಎರಡನೇ ಮದುವೆ ಆಗಿದ್ದೇನೆ ಎಂಬುದಕ್ಕೆ ಸಾಬೀತುಪಡಿಸಲು ಸೂಕ್ತ ದಾಖಲೆಗಳಿಲ್ಲ ಎಂಬ ಕಾರಣವನ್ನಿಟ್ಟುಕೊಂಡು ಆತ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ. ಈ ಅಂಶಗಳು ಮಹಿಳೆಯ ಹಕ್ಕನ್ನು ರಕ್ಷಿಸಲಿವೆ ಎಂದು ನ್ಯಾಯಪೀಠ ತಿಳಿಸಿದೆ. ಅಧೀನ ನ್ಯಾಯಾಲಯ ಆದೇಶ ರದ್ದು ಕೋರಿದ್ದ ನಿವೃತ್ತ ಸರ್ಕಾರಿ ಅಧಿಕಾರಿ ಹಾಗೂ ಆತನ ಮೊದಲ ಪತ್ನಿಯ ಮೇಲ್ಮನವಿ ಅರ್ಜಿಗಳನ್ನು ವಜಾಗೊಳಿಸಿದೆ.

    ಪ್ರಕರಣದ ಹಿನ್ನೆಲೆ :  ಕಳೆದ ಮೂವತ್ತು ವರ್ಷಗಳ ಹಿಂದೆ ಬೆಂಗಳೂರಿನ ಮಹಿಳೆ  ಹಾಗೂ ಕಂದಾಯ ಇಲಾಖೆ ಇನ್ಸ್‌ಪೆಕ್ಟರ್‌ ಆಗಿದ್ದ ಬೆಳಗಾವಿ ಮೂಲದ ವ್ಯಕ್ತಿ ಮದುವೆಯಾಗಿದ್ದು, ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಮಹಿಳೆ ಬೆಂಗಳೂರಿಗೆ ಹಿಂತಿರುಗಿ ತವರು ಮನೆಯಲ್ಲಿ ವಾಸಿಸುತ್ತಾರೆ. ಬಳಿಕ ಆಕೆಗೆ ಮಗಳಾಗಿದ್ದು, ಆಕೆಗೂ ಮದುವೆ ಮಾಡಿ ಅಳಿಯ ಹಾಗೂ ಮಗಳ ಜೊತೆಯಲ್ಲಿಯೇ ವಾಸಿಸುತ್ತಾರೆ.

    ಮೊದಲ ಪತ್ನಿ  ಬಿಟ್ಟು ಹೋದ ಬಳಿಕ ಆ ವ್ಯಕ್ತಿ ಎರಡನೇ ಮದುವೆ  ಮಾಡಿಕೊಂಡಿದ್ದ. ಇಬ್ಬರು ಮಕ್ಕಳ ಜೊತೆ ಅಲ್ಲಿಯೇ ವಾಸಿಸುತ್ತಿದ್ದು, 2016ರಲ್ಲಿ  ಸೇವೆಯಿಂದ ನಿವೃತ್ತಿ ಹೊಂದಿದ್ದಾರೆ. ಈ ಮಧ್ಯೆ ಪತಿಯಿಂದ ಪರಿತ್ಯಕ್ತಗೊಂಡು ಮೂವತ್ತು ವರ್ಷಗಳ ಬಳಿಕ ಪತಿಯಿಂದ ಜೀವನಾಂಶ ಕೊಡಿಸುವಂತೆ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಮೆಟ್ಟಿಲೇರಿದ್ದರು. ಈ ಅರ್ಜಿ ಪುರಸ್ಕರಿಸಿದ್ದ ನ್ಯಾಯಾಲಯ ಅರ್ಜಿದಾರ ಮಹಿಳೆಗೆ ಮಾಸಿಕ 10, ಸಾವಿರ ರೂ. ಜೀವನಾಂಶ, 1ಲಕ್ಷ ರೂ. ಪರಿಹಾರ ನೀಡಬೇಕು ಹಾಗೂ ಬೆಂಗಳೂರಿನಲ್ಲಿ ಬಾಡಿಗೆ ಮನೆ ವಾಸಕ್ಕೆ ಮಾಸಿಕ 1 ಸಾವಿರ ರೂ ನೀಡಬೇಕು ಎಂದು ಪ್ರತಿವಾದಿ  ವ್ಯಕ್ತಿಗೆ ಆದೇಶಿಸಿತ್ತು.

     

    ಈ ಆದೇಶ ಪ್ರಶ್ನಿಸಿ ಆ ವ್ಯಕ್ತಿ  ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿದ್ದ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ, ಮೊದಲ ಪತ್ನಿಗೆ ಮಾಸಿಕ 5 ಸಾವಿರ ರೂ. ಜೀವನಾಂಶ ಹಾಗೂ 50 ಸಾವಿರ ರೂ. ಪರಿಹಾರ ನೀಡುವಂತೆ ಆದೇಶಿಸಿತ್ತು. ಈ ಆದೇಶ ರದ್ದುಪಡಿಸಿ ಜೀವನಾಂಶ ಹಾಗೂ ಪರಿಹಾರ ಮೊತ್ತ ಕಡಿಮೆಗೊಳಿಸುವಂತೆ ಪ್ರಮೋದ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರೆ, ಮೊದಲ ಪತ್ನಿ  ಜೀವನಾಂಶ ಹಾಗೂ ಪರಿಹಾರ ಮೊತ್ತ ಹೆಚ್ಚಿಸುವಂತೆ ಕೋರಿ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply