DAKSHINA KANNADA
ಪಡುಮಲೆಯಲ್ಲಿ ಮಾತನಾಡುವ ವಿಗ್ರಹದ ಕಮಾಲ್!
ಪಡುಮಲೆಯಲ್ಲಿ ಮಾತನಾಡುವ ವಿಗ್ರಹದ ಕಮಾಲ್!
ಪುತ್ತೂರು, ಮಾರ್ಚ್ 8: ಪುತ್ತೂರು ತಾಲೂಕಿನ ಪಡುಮಲೆ ಕ್ಷೇತ್ರದಲ್ಲಿರುವ ಪೂಮಣಿ-ಕನ್ನಿಮಾಣಿ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ಪುನರ್ ಪ್ರತಿಷ್ಟಾ ಬ್ರಹ್ಮಕಲಶೋತ್ಸವದಲ್ಲಿ ಹಲವು ಗೊಂದಲಗಳು ಕಂಡು ಬಂದಿದೆ.
ತುಳುನಾಡಿನ ವೀರ ಪುರುಷರಾದ ಕೋಟಿ-ಚೆನ್ನಯರ ಜನ್ಮಭೂಮಿಯಾದ ಪಡುಮಲೆ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಈಗಾಗಲೇ ಹಲವು ಯೋಜನೆಗಳನ್ನು ಇಲ್ಲಿ ಹಮ್ಮಿಕೊಂಡಿದೆ.
ಈ ಯೋಜನೆಗಳು ಅನುಷ್ಟಾನಕ್ಕಾಗಿ ಪಡುಮಲೆ ಅಭಿವೃದ್ಧಿ ಸಮಿತಿಯೂ ಅಸ್ತಿತ್ವಕ್ಕೆ ಬಂದಿದೆ. ಈ ಸಮಿತಿಯಲ್ಲಿ ಊರಿನ ಹಾಗೂ ಪರವೂರಿನ ವ್ಯಕ್ತಿಗಳೂ ಪದಾಧಿಕಾರಿಗಳಾಗಿದ್ದಾರೆ.
ಇದೇ ರೀತಿ ಪಡುಮಲೆಯ ಭಕ್ತನಾಗಿ ಬಂದಿರುವ ಚಿಕ್ಕಮಗಳೂರಿನ ಸಮಾಜಸೇವಕ ಎನ್ನುವ ರೀತಿಯಲ್ಲಿ ತನ್ನನ್ನು ಪರಿಚಯಿಸಿಕೊಂಡಿರುವ ವ್ಯಕ್ತಿಯೂ ಇದೀಗ ಪೂಮಾಣಿ-ಕಿನ್ನಿಮಾಣಿ ಕ್ಷೇತ್ರದ ಬ್ರಹ್ಮಕಲಶೋತ್ಸವ ವ್ಯವಸ್ಥಾಪನಾ ಸಮಿತಿಯಲ್ಲಿ ಗೌರವಾಧ್ಯಕ್ಷ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ರಾಜ್ಯ ಸರಕಾರದ ಹಲವು ಮಂತ್ರಿಗಳ ಜೊತೆಗೆ ಸಂಪರ್ಕವಿರುವ ಫೋಟೋಗಳನ್ನು ತನ್ನ ಫೇಸ್ಬುಕ್ ಖಾತೆಯಲ್ಲಿ ತುಂಬಿಕೊಂಡಿರುವ ಈ ವ್ಯಕ್ತಿ ಪೂಮಾಣಿ-ಕಿನ್ನಿಮಾಣಿ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಗೋಲ್ಮಾಲ್ ಮಾಡಲು ಹವಣಿಸಿದ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ.
ತನ್ನ ಬಳಿ ಮಾತನಾಡುವ ವಿಗ್ರಹವೊಂದಿದೆ ಎಂದು ಈತ ತಿರುಗಾಡಿಕೊಂಡು ಪುತ್ತೂರಿನ ಪ್ರಭಾವಿ ಕಾಂಗ್ರೇಸ್ ಮುಖಂಡ ಅವರ ಮನೆಗೂ ಈ ವಿಗ್ರಹದೊಂದಿಗೆ ಈತ ಬಂದಿದ್ದ ಎನ್ನುವ ವಿಚಾರ ಇದೀಗ ತಿಳಿದುಬಂದಿದೆ.
ಈ ವಿಗ್ರಹವು ಕಾಂಗ್ರೇಸ್ ಮುಖಂಡರಲ್ಲಿ ಮುಂದೆ ರಾಜಕೀಯವಾಗಿ ಒಳ್ಳೆಯ ದಿನಗಳು ಬರಲಿವೆ ಎನ್ನುವ ಭವಿಷ್ಯವನ್ನೂ ನುಡಿದಿತ್ತು ಎನ್ನಲಾಗಿದೆ.
ಈ ಕಾರಣಕ್ಕಾಗಿ ಪುಳಕಿತಗೊಂಡಿರುವ ಮುಖಂಡರು ಈತನನ್ನು ಬ್ರಹ್ಮಕಲಶೋತ್ಸವ ವ್ಯವಸ್ಥಾಪನಾ ಸಮಿತಿಯ ಗೌರವಾಧ್ಯಕ್ಷರನ್ನಾಗಿಯೂ ನೇಮಿಸಿಕೊಂಡಿದ್ದಾರೆ.
ಬಳಿಕದ ನಡೆಯಲ್ಲಿ ಪೂಮಾಣಿ-ಕಿನ್ನಿಮಾಣಿ ದೈವಗಳ ಸಾನಿಧ್ಯವಿರುವ ಕಲಶಗಳಲ್ಲಿ ಒಂದು ಕಲಶವನ್ನು ತನ್ನ ಮಾತನಾಡುವ ವಿಗ್ರಹಕ್ಕೂ ಅಭಿಷೇಕ ಮಾಡುವಂತೆ ಸಮಿತಿಯವರಿಗೆ ಒತ್ತಡವನ್ನೂ ಹೇರಿದ್ದ ಎನ್ನಲಾಗಿದೆ.
ಅದೇ ಪ್ರಕಾರ ಈ ವಿಚಾರವನ್ನು ಬ್ರಹ್ಮಕಲಶ ನಡೆಸುವ ತಂತ್ರಿಗಳ ಗಮನಕ್ಕೂ ತರಲಾಗಿತ್ತು. ಆದರೆ ಇದನ್ನು ಸರಾಸಗಟಾಗಿ ತಿರಸ್ಕರಿಸಿದ ತಂತ್ರಿಗಳು ಯಾವುದೇ ಕಾರಣಕ್ಕೂ ಇದು ಸಾಧ್ಯವಿಲ್ಲ ಎಂದು ಖಂಡಾತುಂಡಾಗಿ ಹೇಳಿದ್ದರು.
ಈ ವ್ಯಕ್ತಿ ಪಡುಮಲೆಗೆ ಒಕ್ಕರಿಸಿದ ಬಳಿಕ ಪಡುಮಲೆಯಲ್ಲಿ ಹಲವು ಗೊಂದಲಗಳೂ ನಿರ್ಮಾಣಗೊಂಡಿದ್ದು, ಬ್ರಹ್ಮಕಲಶಕ್ಕೆ ಹಾಕಿರುವ ಬ್ಯಾನರ್ ಗಳನ್ನು ಒಂದು ಕಡೆಯ ತಂಡ ಕಟ್ಟಿದರೆ, ಇನ್ನೊಂದು ಕಡೆಯ ತಂಡ ಹರಿಯುವ ಪ್ರಯತ್ನಗಳೂ ನಡೆದಿತ್ತು.
ತನ್ನ ವಿಗ್ರಹಕ್ಕೆ ಕಲಶಾಭಿಷೇಕ ನಡೆಯದ ಕಾರಣ ಬೇರೆ ದಾರಿ ಕಾಣದೆ ಚಿಕ್ಕಮಗಳೂರಿನ ಸಮಾಜಸೇವಕ ಇದೀಗ ಬೇರೆ ಎಲ್ಲೋ ಬ್ರಹ್ಮಕಲಶ ನಡೆಯುತ್ತಿರುವ ಕ್ಷೇತ್ರಗಳತ್ತ ತಿರುಗಾಡುತ್ತಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಈತನ ಬಳಿಯಿರುವ ವಿಗ್ರಹವಾದರೂ ಯಾವುದು, ನಿಜವಾಗಿಯೂ ಆ ವಿಗ್ರಹ ಮಾತನಾಡುತ್ತಿದೆಯೋ ಎನ್ನುವುದು ಆ ವ್ಯಕ್ತಿಯ ನಡವಳಿಕೆಯಷ್ಟೇ ನಿಗೂಢವಾಗಿರುವುದು ಮಾತ್ರ ಸತ್ಯವಾಗಿದೆ.