DAKSHINA KANNADA
ನೀರಿನ ಬಿಲ್ ಕಟ್ಟದಿದ್ದರೆ ಮಾನ ಹರಾಜು ಹಾಕುತ್ತೇನೆ -ಮೇಯರ್ ಕವಿತಾ ಸನಿಲ್ ಎಚ್ಚರಿಕೆ.

ಮಂಗಳೂರು, ಅಗಸ್ಟ್ 10: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ಬಿಲ್ ಪಾವತಿಸದೇ ಇರುವವರ ಹೆಸರನ್ನು ಪತ್ರಿಕೆಯಲ್ಲಿ ಪ್ರಕಟಿಸುವ ಮೂಲಕ ಅವರ ಮಾನ ಹರಾಜು ಮಾಡಲಾಗುವುದು ಎಂದು ಮಂಗಳೂರು ಮೇಯರ್ ಸವಿತಾ ಸನಿಲ್ ಎಚ್ಚರಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಬಿಲ್ ನೀಡಲಾಗಿದ್ದರೂ, 50 ಸಾವಿರಕ್ಕೂ ಮಿಕ್ಕಿ ಬಿಲ್ ಪಾವತಿಯಾಗಿಲ್ಲ. ಈ ಹಿನ್ನಲೆಯಲ್ಲಿ ಪಾಲಿಕೆಗೆ ಭಾರಿ ನಷ್ಟವಾಗುತ್ತಿದೆ ಎಂದ ಅವರು ಪಾಲಿಕೆ ವ್ಯಾಪ್ತಿಯಲ್ಲಿ ಬಡವರು ನೀರಿನ ಬಿಲ್ಲನ್ನು ಪ್ರಾಮಾಣಿಕವಾಗಿ ಪಾವತಿಸುತ್ತಿದ್ದಾರೆ. ಆದರೆ ಹೆಚ್ಚಿನ ಶ್ರೀಮಂತ ವರ್ಗ ಬಿಲ್ ಪಾವತಿಸದೇ ಬಾಕಿ ಉಳಿಸಿಕೊಂಡಿದೆ ಎಂದು ಕಿಡಿ ಕಾರಿದ ಅವರು ಕೆಲವರು 2000 ನೇ ಇಸವಿಯಿಂದ ಬಿಲ್ ಪಾವತಿಸದೇ ಬಾಕಿ ಉಳಿಸಿಕೊಂಡಿದ್ದಾರೆ ಎಂದರು. ಮುಂದಿನ ಹದಿನೈದು ದನಗಳಲ್ಲಿ ಬಿಲ್ ಪಾವತಿಸದೇ ಹೋದಲ್ಲಿ ಅವರ ವಿರುದ್ಧ ನಿರ್ದಾಕ್ಷೀಣ್ಯ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಲಿದೆ ಎಂದರು. ಪಾಲಿಕೆ ವ್ಯಾಪ್ತಿಯಲ್ಲಿ 166 ಮಂದಿ 1 ಲಕ್ಷಕ್ಕೂ ಮೇಲ್ಪಟ್ಟು ಹಣ ಬಾಕಿ ಉಳಿಸಿಕೊಂಡಿದ್ದು, 350 ಮಂದಿ 50 ಸಾವಿರದಿಂದ 1 ಲಕ್ಷದವರೆಗೆ ಬಿಲ್ ಬಾಕಿ ಇರಿಸಿಕೊಂಡಿದ್ದಾರೆ. 2750 ಜನರು 10 ಸಾವಿರ ದಿಂದ 50 ಸಾವಿರದವರೆಗೆ ಬಿಲ್ ಬಾಕಿಯಿರಿಸಿದ್ದು, ಒಟ್ಟು ಸುಮಾರು 20 ಕೋಟಿ ರೂಪಾಯಿವರೆಗೆ ವಸೂಲಿಯಾಗಬೇಕಿದೆ ಎಂದು ಅವರು ಮಾಹಿತಿ ನೀಡಿದರು.