ಪುತ್ತೂರು, ಆಗಸ್ಟ್ 28 : ಅತೀ ವೇಗವಾಗಿ ಬಂದ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಹೋಟೆಲ್ ಹಾಗೂ ಗೂಡಾಂಗಡಿಗಳು ಪುಡಿಪುಡಿಯಾಗಿವೆ. ಸನಿಹದಲ್ಲಿದ್ದ ಅನೇಕರು ಪವಾಢ ಸದೃಶ್ಯ ರೀತಿಯಲ್ಲಿ ಪಾರಾಗಿದ್ದಾರೆ. ಈ ಘಟನೆ ದಕ್ಷಿಣ ಕನ್ನಡದ ವಿಟ್ಲದ ಬೊಬ್ಬೆಕೇರಿ ಎಂಬಲ್ಲಿ ನಡೆದಿದೆ.
ಘಟನೆ ನಡೆದದ್ದು ಹೇಗೆ ?
ಮಂಗಳೂರು ಕಡೆಯಿಂದ ವಿಟ್ಲ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ಚಾಲಕ ಎದುರಿನಿಂದ ಬರುತ್ತಿದ್ದ ಇನ್ನೊಂದು ಬಸ್ಸನ್ನು ತಪ್ಪಿಸುವ ಯತ್ನ ಮಾಡಿದ್ದಾನೆ. ಈ ಭರದಲ್ಲಿ ಬಸ್ ರಸ್ತೆ ಬದಿಯಲ್ಲಿದ್ದ ಹೋಟೆಲ್ ಹಾಗೂ ಗೂಡಾಂಗಡಿಗೆ ನುಗ್ಗಿದೆ. ಇದರಿಂದ ಗಣೇಶ್ ಎಂಬವರ ಆಮ್ಲೇಟ್ ಗೂಡಾಂಗಡಿ ಸಂಪೂರ್ಣವಾಗಿ ಹಾನಿಗೊಂಡಿದೆ. ನಿತ್ಯಾನಂದ ಎಂಬ ಹೋಟೆಲ್ ಛಾವಣಿ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಇದರಿಂದ ಸಾವಿರಾರು ರೂಪಾಯಿಗಳ ನಷ್ಟ ಸಂಭವಿಸಿದೆ.
ಹೋಟೆಲ್ ನಲ್ಲಿ ಗ್ರಾಹಕರು ಹೊರಗಡೆಯಿದ್ದು, ಗೂಡಾಂಗಡಿ ಬಾಗಿಲು ಹಾಕಿದ್ದ ವೇಳೆ ಈ ಘಟನೆ ನಡೆದಿದೆ. ಇದರಿಂದ ಸಂಭವಿಸಲಿದ್ದ ದೊಡ್ಡದೊಂದು ದುರಂತ ತಪ್ಪಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದ್ದಾರೆ.