UDUPI
ನವೆಂಬರ್ ಒಳಗೆ ಎಲ್ಲಾ ರಸ್ತೆಗಳು ಗುಂಡಿರಹಿತ- ಪ್ರಮೋದ್ ಮಧ್ವರಾಜ್
5053 ಕಾಮಗಾರಿ 711 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ: ಸಚಿವ ಪ್ರಮೋದ್
ಉಡುಪಿ, ಅಕ್ಟೋಬರ್ 13 : ಎಲ್ಲ ರಸ್ತೆ ಕಾಮಗಾರಿಗಳನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಬೇಕೆಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಮೋದ್ ಮಧ್ವರಾಜ್ ಅವರು ಹೇಳಿದರು.
ಅವರಿಂದು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಉಡುಪಿ ವಿಧಾನ ಸಭಾ ಕ್ಷೇತ್ರದ ವಿವಿಧ ಯೋಜನೆಯಡಿ ನಿರ್ವಹಿಸಿದ ಕಾಮಗಾರಿಗಳ ಬಗ್ಗೆ ಇಂಜಿನಿಯರ್‍ಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ರಸ್ತೆಗಳು, ಸೇತುವೆ, ಕಟ್ಟಡ, ಕಿಂಡಿ ಅಣೆಕಟ್ಟು, ಕೆರೆ ಹೂಳೆತ್ತುವುದು, ಶಾಲಾ ಕಟ್ಟಡಗಳು, ನೀರು ಸರಬರಾಜು ಯೋಜನೆಗಳು, ನದಿದಂಡೆ ಸಂರಕ್ಷಣೆಗಳು, ಇತರೆ ಕಾರ್ಯಕ್ರಮ, ತಡೆಗೋಡೆ ನಿರ್ಮಾಣ, ಮಲ್ಪೆ ಬೀಚ್‍ಗೆ ಮೂಲಭೂತ ಸೌಕರ್ಯ, ಮೀನುಗಾರಿಕಾ ಜೆಟ್ಟಿ, ಮತ್ತು ಆಸ್ಪತ್ರೆ ಕಟ್ಟಡಗಳ ಒಟ್ಟು 5053 ಕಾಮಗಾರಿಗಳು 711 ಕೋಟಿ.ರೂ ವೆಚ್ಚದಲ್ಲಿ ನಿರ್ಮಾಣ ಕಾರ್ಯಗಳು ಸಂಪೂರ್ಣಗೊಳ್ಳಲಿವೆ.
4074 ಕಾಮಗಾರಿಗಳು 446 ಕೋಟಿ.ರೂ ವೆಚ್ಚದಲ್ಲಿ ನಿರ್ಮಾಣ ಕಾರ್ಯಗಳು ಈಗಾಗಲೇ ಪೂರ್ಣಗೊಂಡಿವೆ. 439 ಕಾಮಗಾರಿಗಳು 121 ಕೋಟಿ.ರೂ ವೆಚ್ಚದ ಕಾರ್ಯಗಳು ಪ್ರಗತಿಯಲ್ಲಿದ್ದು, 540 ಕಾಮಗಾರಿಗಳು 144 ಕೋಟಿ.ರೂ ವೆಚ್ಚದ ಕಾರ್ಯಗಳು ಮಂಜೂರಾಗಿ ಪ್ರಾರಂಭಿಸಲು ಬಾಕಿ ಉಳಿದಿವೆ ಎಂದು ಹೇಳಿದರು.
ಮಲ್ಪೆ, ಪರ್ಕಳ, ಬ್ರಹ್ಮಾವರ, ಬಾರ್ಕೂರು, ಉಡುಪಿ, ಮಣಿಪಾಲ ಮುಂತಾದ ಭಾಗದ ರಸ್ತೆಗಳಲ್ಲಿ ಬಿದ್ದ ಗುಂಡಿಗಳನ್ನು ಮುಚ್ಚುವ ಕೆಲಸ ಅತ್ಯಂತ ಶೀಘ್ರವಾಗಿ ನಡೆಯಬೇಕು, ವಿಶೇಷವಾಗಿ ಮಣಿಪಾಲ, ಉಡುಪಿಯ ರಸ್ತೆಗಳ ಕೆಲಸವನ್ನು ಆದಷ್ಟು ಬೇಗ ಮುಗಿಸಬೇಕು. ಉಡುಪಿ ವಿಧಾನ ಸಭಾ ರಸ್ತೆಗಳನ್ನು ಮೂರುವರೆಯಿಂದ ಐದೂವರೆ ಮೀಟರ್‍ಗೆ ಅಗಲ ಗೊಳಿಸಬೇಕು. ನವೆಂಬರ್ ಅಂತ್ಯದೊಳಗೆ ಎಲ್ಲಾ ರಸ್ತೆಗಳು ಗುಂಡಿರಹಿತವಾಗಿರಬೇಕು ಎಂದು ಆದೇಶ ಹೊರಡಿಸಿದರು.
ವಿವಿಧ ಕಾಮಗಾರಿಗಳ ಕುರಿತು ವಿವಿಧ ವಿಭಾಗದ ಇಂಜಿನಿಯರ್‍ಗಳು ಸಚಿವರಿಗೆ ಮಾಹಿತಿ ನೀಡಿದರು.