UDUPI
ತ್ಯಾಜ್ಯದಿಂದ ಸಂಪನ್ಮೂಲ – ನಿಟ್ಟೆ ಪಂಚಾಯತ್‍ನಲ್ಲಿ ಮಾರಾಟ ಮಳಿಗೆ ಆರಂಭ

ತ್ಯಾಜ್ಯದಿಂದ ಸಂಪನ್ಮೂಲ – ನಿಟ್ಟೆ ಪಂಚಾಯತ್‍ನಲ್ಲಿ ಮಾರಾಟ ಮಳಿಗೆ ಆರಂಭ
ಉಡುಪಿ, ನವೆಂಬರ್ 8: ಜಿಲ್ಲೆಯ ಘನ ಮತ್ತು ದ್ರವ ಸಂಪನ್ಮೂಲ ನಿರ್ವಹಣಾ ಘಟಕ ಉತ್ಪಾದಿಸಿದ ಉತ್ಪಾದನೆಗಳ ಪ್ರಥಮ ಮಾರಾಟ ಮಳಿಗೆಯನ್ನು ಕಾರ್ಕಳದ ನಿಟ್ಟೆ ಗ್ರಾಮಪಂಚಾಯಿತಿಯಲ್ಲಿ ಇಂದು ಶಾಸಕ ಸುನಿಲ್ ಕುಮಾರ್ ಅವರು ಉದ್ಘಾಟಿಸಿದರು.
ಜಿಲ್ಲಾಧಿಕಾರಿಗಳ ಬಹುನಿರೀಕ್ಷಿತ ಯೋಜನೆ ಇದಾಗಿದ್ದು, ಜಿಲ್ಲಾಧಿಕಾರಿಗಳು ಘಟಕಕ್ಕೆ ಭೇಟಿ ನೀಡಿದರಲ್ಲದೆ ಇತರ ಎಲ್ಲ ಅಧಿಕಾರಿಗಳು ಹಾಗೂ ಗ್ರಾಹಕರಲ್ಲೂ ಘಟಕ ಹಾಗೂ ಮಾರಾಟ ಮಳಿಗೆಯನ್ನು ವೀಕ್ಷಿಸಿ ಸದ್ಬಳಕೆ ಮಾಡಲು ಎಲ್ಲ ಮನವಿ ಮಾಡಿಕೊಂಡರು.

ಜಿಲ್ಲಾಡಳಿತ ಆಯೋಜಿಸಿದ ಘನ ತ್ಯಾಜ್ಯ ವಿಲೇಯ ತರಬೇತಿಯನ್ನು ಪಡೆದ 5 ಜನರ ತಂಡ, ತಮ್ಮ ವ್ಯಾಪ್ತಿಯ ವಾರ್ಡ್‍ಗಳಲ್ಲಿ ದಿನಕ್ಕೆ ಎರಡು ಬಾರಿ ಸಂಚರಿಸಿ ತ್ಯಾಜ್ಯ ಸಂಗ್ರಹಿಸುವುದಲ್ಲದೆ ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಘಟಕದಲ್ಲಿದ್ದು ತ್ಯಾಜ್ಯವನ್ನು ಸಂಪನ್ಮೂಲವಾಗಿ ಪರಿವರ್ತಿಸಿ ಮಾರಾಟವನ್ನು ಆರಂಭಿಸಿರುವುದು ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಬರೆದ ಯಶಸ್ವಿ ಮುನ್ನುಡಿಯಾಗಿದೆ.
ತ್ಯಾಜ್ಯವನ್ನು ಸಂಸ್ಕರಿಸಿ ಗೊಬ್ಬರವನ್ನಾಗಿಸುವ ಪ್ರಕ್ರಿಯೆ ಸಂಪೂರ್ಣವಾಗಿ ಪ್ರಾಕೃತಿಕವಾಗಿದ್ದು, ಕಸ ಸಂಗ್ರಹ ಆರಂಭದಿಂದಲೇ ಕಸವನ್ನು ವಿಭಜಿಸುವ ಮೂಲಕ ಆರಂಭಗೊಳ್ಳುತ್ತದೆ. ಟೈಲರ್‍ಗಳ ಅಂಗಡಿಯಲ್ಲಿ ದೊರೆಯುವ ಚಿಂದಿ ಬಟ್ಟೆಗಳಿಂದ ತಯಾರಿಸಿದ ತಲೆದಿಂಬು, ಮೊಟ್ಟೆಯ ಸಿಪ್ಪೆಯಿಂದ ತಯಾರಿಸಿದ ಕ್ಯಾಲ್ಷಿಯಂ ಷೆಲ್ ಪೌಡರ್, ನಿಂಬೆ, ಮುಸುಂಬಿ, ಕಿತ್ತಳೆಯ ತ್ಯಾಜ್ಯದ ಜೊತೆಗೆ ಶೀಗೆ ಮತ್ತು ನೊರೆಕಾಯಿ ಬಳಸಿ ತಯಾರಿಸಿದ ಪಾತ್ರೆ ತೊಳೆಯುವ ಪುಡಿ, ಒಣಹೂವಿನ ತ್ಯಾಜ್ಯದಿಂದ ತಯಾರಿಸಿದ ರಂಗೋಲಿ ಪುಡಿ, ಬಟ್ಟೆ ಬ್ಯಾಗ್, ಡೋರ್ ಮ್ಯಾಟ್, ಪಂಚಗವ್ಯ, ಅಮೃತಪಾಣಿಯೆಂಬ ಜೈವಿಕ ಕೀಟನಾಶಕ, ಗುನಾಬ್‍ಜಲಂ, ಸಾವಯವ ಎರೆಹುಳ ಗೊಬ್ಬರ, ಹಸುವಿನ ಸೆಗಣಿಯಿಂದ ತಯಾರಿಸಿದ ಗೊಬ್ಬರಗಳನ್ನು ಮಾರಾಟಕ್ಕಿಡಲಾಗಿದೆ.
250 ಮನೆಗಳಿಂದ ಪ್ರಸಕ್ತ ತ್ಯಾಜ್ಯವನ್ನು ಸಂಗ್ರಹಿಸಲಾಗುತ್ತಿದೆ. ಇನ್ನೂ ಹಲವು ಸಾಮಗ್ರಿಗಳನ್ನು ತಯಾರಿಸಲು ಘಟಕ ಸನ್ನದ್ದವಾಗಿದ್ದು ನಿಟ್ಟೆ ಪಂಚಾಯಿತಿಯನ್ನು ಪೈಲಟ್ ಯೋಜನೆಯಲ್ಲಿ ಆಯ್ಕೆ ಮಾಡಲಾಗಿದ್ದು, ಇಂದು ಹಲವು ಉತ್ತಮ ಮಾದರಿ ನೀಡಿ ಪಂಚಾಯಿತಿ ಮುಂಚೂಣಿಯಲ್ಲಿದ್ದು, ತ್ಯಾಜ್ಯವನ್ನು ಸಂಪನ್ಮೂಲವಾಗಿಸುವಲ್ಲೂ ಯಶಸ್ವಿಯಾಗಿದೆ.