DAKSHINA KANNADA
ಡಾ. ಮೋಹನ್ ಅಳ್ವಾ ಪರ ಬೆಂಬಲ : ಆಗಸ್ಟ್ 12ರಂದು ಮೂಡಬಿದಿರೆಯಲ್ಲಿ ಬೃಹತ್ ಸಭೆ
ಮಂಗಳೂರು, ಆಗಸ್ಟ್ 04 :ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಕ್ರೀಡಾ ವಿದ್ಯಾರ್ಥಿನಿ ಕಾವ್ಯಾ ಅಸಹಜ ಸಾವಿನ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿರುವಾಗಲೇ ಕೆಲವು ದೃಶ್ಯ ಮಾಧ್ಯಮಗಳು, ಜಾಲತಾಣಗಳಲ್ಲಿ ನಡೆಯುತ್ತಿರುವ ವ್ಯವಸ್ಥಿತ ಅಪಪ್ರಚಾರದ ವಿರುದ್ಧ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ಼ ಡಾ. ಎಂ ಮೋಹನ ಆಳ್ವ ಅವರಿಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು ಆಳ್ವಾರ ಪರ ಬೃಹತ್ ಸಭೆಯನ್ನು ನಡೆಸಲು ಉದ್ದೇಶಿಸಲಾಗಿದೆ. ಮೂಡಬಿದಿರೆ ಕೋ ಆಪರೇಟಿವ್ ಸರ್ವೀಸ್ ಬ್ಯಾಂಕಿನ ಸಭಾಂಗಣದಲ್ಲಿ ಗುರುವಾರ ಮಾಜಿ ಸಚಿವ ಅಮರನಾಥ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.
ಸಭೆಯಲ್ಲಿ ಮೂಡಬಿದರೆ ಹಾಗೂ ಪರಿಸರದ ಅಪಾರ ಸಂಖ್ಯೆಯಲ್ಲಿ ಜಾತಿ, ಮತ, ವರ್ಗ, ಪಕ್ಷ ಭೇದ ಮರೆತು ನಾಗರಿಕರು ಪಾಲ್ಗೊಂಡು ಡಾ. ಆಳ್ವರು ಹಾಗೂ ಅವರ ವಿದ್ಯಾಸಂಸ್ಥೆಯ ಮೇಲಾಗುತ್ತಿರುವ ತೇಜೋವಧೆಯ ಬಗ್ಗೆ ಕಳಕಳಿ ವ್ಯಕ್ತಪಡಿಸಿದರು.
ಮಾಜಿ ಸಚಿವ ಹಾಗೂ ಸ್ಥಳೀಯ ಶಾಸಕರಾದ ಕೆ. ಅಭಯಚಂದ್ರ ಮಾತನಾಡಿ, ಕಾವ್ಯಾಳಂಥ ಪ್ರತಿಭಾವಂತ ಕ್ರೀಡಾಳುವಿನ ಸಾವಿಗೆ ಸಂತಾಪ ವ್ಯಕ್ತಪಡಿಸುವುದು ನಮ್ಮೆಲ್ಲರ ಕರ್ತವ್ಯ. ಅದೇ ರೀತಿ, ಶಿಕ್ಷಣ, ಕಲೆ, ಸಾಹಿತ್ಯ, ಕ್ರೀಡಾರಂಗಗಳಲ್ಲಿ ಮೂಡಬಿದಿರೆಯನ್ನು ಎತ್ತರಕ್ಕೇರಿಸುತ್ತ, ವಿಶ್ವಕ್ಕೆ ಪರಿಚಯಿಸಿದ ಡಾ. ಮೋಹನ್ ಆಳ್ವ ಹಾಗೂ ಅವರ ಸಂಸ್ಥೆಯ ವರ್ಚಸ್ಸಿಗೆ ಯಾವುದೇ ರೀತಿಯ ಧಕ್ಕೆ ಆಗದಂತೆ ನೋಡಿಕೊಳ್ಳಬೇಕಾಗಿದೆ. ಮಾಧ್ಯಮ ಸ್ವಾತಂತ್ರ್ಯದ ಬಗ್ಗೆ ಸಮಾಜ ತಿಳಿಹೇಳಬೇಕಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಕೃಷಿಕ ಸಮಾಜದ ಮಂಗಳೂರು ತಾಲೂಕು ಅಧ್ಯಕ್ಷ ಕೆ. ಕೃಷ್ಣರಾಜ ಹೆಗ್ಡೆ ಅವರು ಮಾತನಾಡಿ, ಮತೀಯ ಸೌಹಾರ್ದದ ಈ ಊರಿನಲ್ಲಿ ನಡೆದಿರುವ ಈ ಸಭೆ ಡಾ. ಆಳ್ವರಿಗೆ ನೈತಿಕ ಶಕ್ತಿ ತುಂಬುವ ಕೆಲಸ ಮಾಡಿದೆ; ಸಾಮಾಜಿಕ ಜಾಲತಾಣದಲ್ಲಿ ಹರಡಲಾಗುವ ಕಪೋಲಕಲ್ಪಿತ ಸುದ್ದಿಗಳೇ ಮುಂದೆ ಇತಿಹಾಸವಾಗಿ ಮಾರ್ಪಾಡಾಗುವ ಅಪಾಯ ಕಾದಿದೆ ಎಂದು ಎಚ್ಚರಿಸಿದರು. ದ.ಕ. ಜಿಲ್ಲಾ ಮಾಜಿ ಸೈನಿಕರ ವೇದಿಕೆಯ ವತಿಯಿಂದ ಭಗವಾನ್ ದಾಸ್ ಶೆಟ್ಟಿ ಅವರು ಆ.12ರ ಸಭೆಗೆ ಪೂರ್ಣ ಬೆಂಬಲ ವ್ಯಕ್ತಪಡಿಸಿದರು.
ಚೌಟರ ಅರಮನೆ ಕುಲದೀಪ ಎಂ. , ಕೃಷಿಋಷಿ ಡಾ. ಎಲ್.ಸಿ.ಸೋನ್ಸ್, ಸಹಿತ ವಿವಿಧ ಸಂಘಟನೆಗಳು, ಸಮುದಾಯಗಳ ಪ್ರಮುಖರು ಪಾಲ್ಗೊಂಡಿದ್ದರು. ಆಗಸ್ಟ್ 12ರಂದು ಮೂಡಬಿದಿರೆ ಪದ್ಮಾವತಿ ಕಲಾಮಂದಿರದಲ್ಲಿ ನಡೆಯುವ ಸಭೆಯಲ್ಲಿ ಧಾರ್ಮಿಕ ನಾಯಕರು, ಸಾಮಾಜಿಕ ಚಿಂತಕರು, ರಾಜಕೀಯ ಧುರೀಣರು ಹೀಗೇ ವಿವಿಧ ಕ್ಷೇತ್ರಗಳ ಸುಮಾರು 5000 ಮಂದಿ ಭಾಗವಹಿಸುವ ನಿರೀಕ್ಷೆ ಇದೆ.
Also Read……………..
ಕಾವ್ಯ ಆತ್ಮಹತ್ಯೆ ಪ್ರಕರಣ, ಯಾವುದೇ ತನಿಖೆಗೆ ಸಿದ್ದ – ಡಾ. ಮೋಹನ್ ಆಳ್ವಾ