UDUPI
ಜ್ಯುವೆಲ್ಲರಿ ಕಳ್ಳತನ ಪ್ರಕರಣ – 5 ನೇಪಾಳಿಗರ ಬಂಧನ, ಆಭರಣ ವಶ

ಜ್ಯುವೆಲ್ಲರಿ ಕಳ್ಳತನ ಪ್ರಕರಣ – 5 ನೇಪಾಳಿಗರ ಬಂಧನ, ಆಭರಣ ವಶ
ಉಡುಪಿ ಸೆಪ್ಟೆಂಬರ್ 19: ಆರು ತಿಂಗಳ ಹಿಂದೆ ನಡೆದ ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಶಿರೂರು ಗೋಲ್ಡ್ ಪ್ಯಾಲೇಸ್ ಜ್ಯುವೆಲ್ಲರಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಡಿಸಿಐಬಿ ಪೊಲೀಸರು ಐವರು ನೆಪಾಳಿಗರನ್ನು ಬಂಧಿಸಿ, ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ನೇಪಾಳದ ಸಿಲ್ಗಡಿ ದೋಟಿ ಜಿಲ್ಲೆಯ ದಿಬಾಯಿಲ್ ತಾಲೂಕಿನ ಸೇರಿ ನಿವಾಸಿಗಳಾದ ಶಿವಾಸಿಂಗ್ ಬಹದ್ದೂರ್ ಶಿವಪ್ರೇಮ್, ಕಮರ್ ಸಿಂಗ್ ಸೌದ್ ದುಕಿಯಾ, ರಮೇಶ ಸಿಂಗ್ ಪಾರ್ಕಿ, ಹರ್ಕ್ ಬಹದ್ದೂರ್ ಸೌದ್, ಪ್ರೇಮ್ ಬಹಾದ್ದೂರ್ ಸೌದ್ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.

ಇವರು ಎಪ್ರಿಲ್ 2ರಂದು ಶಿರೂರು ಗೋಲ್ಡ್ ಪ್ಯಾಲೇಸ್ ಜ್ಯುವೆಲ್ಲರಿಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಬೆಳ್ಳಿಯ ಆಭರಣಗಳನ್ನು ಕಳವು ಮಾಡಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿ ಯಾಗಿದ್ದಾರೆ.
ಜ್ಯುವೆಲ್ಲರಿಯಿಂದ ಕಳವು ಮಾಡಿದ 3 ಕೆ.ಜಿ. ತೂಕದ ಬೆಳ್ಳಿಯ ಕಾಲುಚೈನುಗಳನ್ನು ಬಂಧಿತರಿಂದ ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ 1,80,000 ರೂ. ಎಂದು ಅಂದಾಜಿಸಲಾಗಿದೆ.
ಬಂಧಿತರ ಈ ತಂಡ ಗೂರ್ಖಾ ಕೆಲಸ ಹಾಗೂ ಫಾಸ್ಟ್ ಫುಡ್ ಹೊಟೇಲ್ ಗಳಲ್ಲಿ ಕೆಲಸ ಮಾಡಿಕೊಂಡಿದ್ದು, ತಾವು ಕೆಲಸ ಮಾಡುವ ಸ್ಥಳದಲ್ಲಿರುವ ಚಿನ್ನದ ಅಂಗಡಿಯನ್ನು ಗುರಿಯಾಗಿಸಿ ರಾತ್ರಿ ವೇಳೆಯಲ್ಲಿ ಕಳ್ಳತನ ಮಾಡಿದೆ. ಆರೋಪಿ ಗಳನ್ನು ಹಾಗೂ ಸ್ವಾಧೀನಪಡಿಸಿಕೊಂಡ ಸೊತ್ತುಗಳನ್ನು ಬೈಂದೂರು ಠಾಣೆಗೆ ಹಸ್ತಾಂತರಿಸಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಸಂಜೀವ್ ಎಂ.ಪಾಟೀಲ್ ನಿರ್ದೇಶನದಲ್ಲಿ ಕುಂದಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಪ್ರವೀಣ್ ಎಚ್. ನಾಯಕ್ ಮಾರ್ಗದರ್ಶನದಲ್ಲಿ ಉಡುಪಿ ಡಿಸಿಐಬಿ ಪೊಲೀಸ್ ನಿರೀಕ್ಷಕ ಸಂಪತ್ ಕುಮಾರ್ ಹಾಗೂ ಎಎಸ್ಸೈಗಳಾದ ರೊಸಾ ರಿಯೋ ಡಿಸೋಜ, ರವಿಚಂದ್ರ ಮತ್ತು ಸಿಬ್ಬಂದಿಗಳಾದ ಸುರೇಶ, ಚಂದ್ರ ಶೆಟ್ಟಿ, ರಾಮು ಹೆಗ್ಡೆ, ರಾಘವೇಂದ್ರ ಉಪ್ಪುಂದ, ಸಂತೋಷ ಕುಂದರ್, ಪ್ರವೀಣ, ರಾಜ ಕುಮಾರ್ ಬೈಂದೂರು, ದಯಾನಂದ ಪ್ರಭು, ಶಿವಾನಂದ, ಚಾಲಕ ರಾಘವೇಂದ್ರ ಈ ಕಾರ್ಯಾಚರಣೆ ನಡೆಸಿದ್ದಾರೆ.