DAKSHINA KANNADA
ಜಿಲ್ಲೆಯಲ್ಲಿ ಅಶಾಂತಿಯ ವರಸೆ: RAFನಿಂದ ಸುರಕ್ಷತೆಯ ಭರವಸೆ
ಮಂಗಳೂರು, ಅಗಸ್ಟ್ 30 : ಮಂಗಳೂರಿನ ನಗರದಲ್ಲಿಂದು ಕ್ಷಿಪ್ರ ಪ್ರಹಾರ ದಳ ಪಥ ಸಂಚಲನ ನಡೆಸಿತು. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಆರ್ ಎ ಎಫ್ ನ ಒಂದು ತುಕಡಿ ಮಂಗಳೂರಿಗೆ ಆಗಮಿಸಿದೆ. 150 ಶಸ್ತ್ರ ಸಜ್ಜಿತರ ಈ ಪಡೆ ಕೆಲ ದಿನಗಳ ಕಾಲ ಜಿಲ್ಲೆಯಲ್ಲಿರಲಿದೆ. ರಾಜ್ಯದಲ್ಲೇ ಅತೀ ಕೋಮು ಸೂಕ್ಷ್ಮ ಕುಖ್ಯಾತಿ ಪಡೆದಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಣ್ಣಪುಟ್ಟ ಕ್ಷುಲ್ಲಕ ಘಟನೆಗಳು ಕೂಡ ಕೋಮುಗಲಭೆ ಗಳಾಗಿ ಪರಿವರ್ತನೆಗೊಂಡ ಉದಾಹರಣೆಗಳಿರುವುದರಿಂದ ರಾಜ್ಯ ಸರ್ಕಾರ ಈ ವಿಶೇಷ ಪಡೆಯನ್ನು ಜಿಲ್ಲೆಗೆ ರವಾನಿಸಿದೆ. ಮುಸ್ಲೀಮರ ಪವಿತ್ರ ಹಬ್ಬ ಬಕ್ರೀದ್ ಸೆಪ್ಟೆಂಬರ್ 1 ರಂದು ಮಂಗಳೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಆಚರಿಸಲಾಗುತ್ತಿದೆ. ಮುಸ್ಲಿಂ ಬಾಂಧವರಿಗೆ ಕರಾವಳಿಯ ಈ ಭಾಗದಲ್ಲಿ ಚಂದ್ರದರ್ಶನ ಒಂದು ದಿವಸ ಮುಂಚಿತವಾಗಿ ಆಗುವುದರಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಒಂದು ದಿವಸ ಮುಂಚಿತವಾಗಿ ಬಕ್ರೀದ್ ಆಚರಿಸಲಾಗುತ್ತದೆ. ಈ ಮಧ್ಯೆ ನಗರದ ಕೇಂದ್ರ ಮೈದಾನದಲ್ಲಿ ಹಿಂದೂ ಯುವ ಸೇನೆ ವತಿಯಿಂದ ಪೂಜಿಸಲ್ಪಡುವ 25 ನೇ ವರ್ಷದ ರಜತಾ ಸಂಭ್ರಮದ ಗಣೇಶೋತ್ಸವದ ವಿಸರ್ಜನಾ ಕಾರ್ಯಕ್ರಮ ಸೆಪ್ಟೆಂಬರ್ 2 ರಂದು ನಡೆಯಲಿದೆ .ಇದರ ಬೃಹತ್ ಶೋಭಾಯಾತ್ರೆ ನಗರದಲ್ಲಿ ನಡೆಯಲಿದೆ ಈ ಸಂದರ್ಭದಲ್ಲೂ ಬಿಗಿ ಭದ್ರತೆಯ ಅವಶ್ಯಕತೆ ಇದೆ. ಈ ನಡುವೆ ಬಿಜೆಪಿ ಯುವ ಮೋರ್ಚಾದ ನೇತ್ರತ್ವದಲ್ಲಿ ಸೆಪ್ಟೆಂಬರ್ 7 ರಂದು ಮಂಗಳೂರಿನಲ್ಲಿ ರಾಜ್ಯ ಸರ್ಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರ ರಾಜಿನಾಮೇ ಆಗ್ರಹಿಸಿ ಬೃಹತ್ ಪ್ರತಿಭಟನಾ ಸಭೆ ಕೂಡ ಆಯೋಜಿಸಲಾಗಿದೆ . ಇದರಲ್ಲಿ 25 ,000 ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ರಾಜ್ಯದ ವಿವಿಧ ಭಾಗಗಳಿಂದ ಭಾಗವಹಿಸುವ ನಿರೀಕ್ಷೆಯಿದೆ. ಈ ಎಲ್ಲಾ ವಿಚಾರಗಳನ್ನು ಮುಂದಿಟ್ಟು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ನಿಭಾಯಿಸಲು ಜಿಲ್ಲಾಡಳಿತಕ್ಕೆ ಸಹಾಯವಾಗುವ ನಿಟ್ಟಿನಲ್ಲಿ ಆರ್ ಎ ಎಫ್ ಪಡೆಯನ್ನು ಮಂಗಳೂರಿಗೆ ಆಗಮಿಸಿದೆ. ಬೆಂಗಳೂರಿನಿಂದ ಬಂದಿರುವ ಆರ್ ಎ ಎಫ್ ಪಡೆಯೊಂದಿಗೆ ಮಂಗಳೂರು ನಗರ ಪೊಲೀಸರು, ನಗರ ಶಶಸ್ತ್ರ ಮೀಸಲು ಪೋಲಿಸ್ ಪಡೆ ಕೂಡ ಮಂಗಳೂರಿನ ರಸ್ತೆಗಳಲ್ಲಿ ಫ್ಲ್ಯಾಗ್ ಮಾರ್ಚ್ ನಡೆಸಿ ಜನರಲ್ಲಿ ಧೈರ್ಯ ತುಂಬಿದೆ ಮತ್ತು ಸಮಾಜಘಾತುಕ ಶಕ್ತಿಗಳಿಗೆ ಎಚ್ಚರಿಕೆ ನೀಡುವ ಕಾರ್ಯ ಪೊಲೀಸ್ ಇಲಾಖೆ ಮಾಡಿದೆ.
ವಿಡಿಯೋಗಾಗಿ ಕ್ಲಿಕ್ ಮಾಡಿ..