DAKSHINA KANNADA
ಗೋಳಿತ್ತಡಿ-ಏಣಿತಡ್ಕ ಗ್ರಾಮಸ್ಥರಿಗೆ ರಾಜ್ಯ ಸರಕಾರದ ಹೊಸ ಭಾಗ್ಯ
ಗೋಳಿತ್ತಡಿ-ಏಣಿತಡ್ಕ ಗ್ರಾಮಸ್ಥರಿಗೆ ರಾಜ್ಯ ಸರಕಾರದ ಹೊಸ ಭಾಗ್ಯ
ಪುತ್ತೂರು, ಮಾರ್ಚ್ 8: ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರಕಾರ ರಾಜ್ಯದ ಎಲ್ಲಾ ಜಾತಿ,ಧರ್ಮ, ಪಂಗಡಗಳಿಗೆ ಬೇಕಾದ ರೀತಿಯ ಭಾಗ್ಯಗಳನ್ನು ನೀಡಿದೆ.
ಅದೇ ರೀತಿ ಪುತ್ತೂರು ತಾಲೂಕಿನ ಕೊಯಿಲಾ ಗ್ರಾಮದ ಗೋಳಿತ್ತಡಿ-ಏಣಿತಡ್ಕ ರಸ್ತೆಯನ್ನು ಬಳಸುವ ಗ್ರಾಮಸ್ಥರಿಗೂ ಇದೀಗ ಇನ್ನೊಂದು ಹೊಸ ಭಾಗ್ಯವನ್ನು ನೀಡಿದೆ.
ಹೌದು ಇದು ಜಲ್ಲಿ ಭಾಗ್ಯ. ಈ ಭಾಗ್ಯವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇರವಾಗಿ ನೀಡದಿದ್ದರೂ, ಅವರ ಅನುಯಾಯಿಗಳು ಹಾಗೂ ಅಧಿಕಾರಿಗಳು ಸೇರಿ ಈ ಊರಿನ ಜನರಿಗೆ ಕಳೆದ ಮೂರು ತಿಂಗಳಿನಿಂದ ಜಲ್ಲಿ ಭಾಗ್ಯವನ್ನು ದಯಪಾಲಿಸಿದ್ದಾರೆ.
ಗೋಳಿತ್ತಡಿ ಜಂಕ್ಷನ್ ನಿಂದ ತ್ರಿವೇಣಿ ಸರ್ಕಲ್ ವರೆಗಿನ ರಸ್ತೆ ಸಂಪೂರ್ಣ ಹದಗೆಟ್ಟಿತ್ತು.
ಸ್ಥಳೀಯ ಶಾಸಕ ಅಂಗಾರ ಸುಮಾರು 1.49 ಕಿಲೋಮೀಟರ್ ದೂರದ ಈ ರಸ್ತೆಯ ದುರಸ್ಥಿಗೆ ರಾಜಕೀಯ ಕಾರಣದ ಹಿನ್ನಲೆಯಲ್ಲಿ ಆಸಕ್ತಿ ವಹಿಸದಿದ್ದರಿಂದ ಈ ರಸ್ತೆಯ ಉಸ್ತುವಾರಿಯನ್ನು ರಾಮಕುಂಜ ಗ್ರಾಮಪಂಚಾಯತ್ ನ ಸದಸ್ಯ ಯತೀಶ್ ಕುಮಾರ್ ಬಾನಡ್ಕ ವಹಿಸಿಕೊಂಡಿದ್ರು.
ಗ್ರಾಮಪಂಚಾಯತ್ ಚುನಾವಣೆಯಲ್ಲಿ ಜಯಗಳಿಸಿದಲ್ಲಿ ರಸ್ತೆಯನ್ನು ಡಾಮರೀಕರಣ ಮಾಡುವುದಾಗಿ ಚುನಾವಣೆ ಸಂದರ್ಭದಲ್ಲಿ ಹೇಳಿ ಗೆದ್ದೂ ಆಗಿದೆ.
ಗ್ರಾಮಪಂಚಾಯತ್ ಸದಸ್ಯನಾದ ಬಳಿಕ ಗ್ರಾಮಸ್ಥರ ಕಿರಿಕಿರಿ ತಾಳಲಾರದೆ ಇತ್ತೀಚೆಗೆ ರಸ್ತೆಯ ಕಾಮಗಾರಿಗಾಗಿ ಸುಳ್ಯದ ಕಾಂಗ್ರೇಸ್ ಮುಖಂಡ ಡಾ. ರಘು ಅವರ ಮುಖಾಂತರ ರಾಜ್ಯ ಸರಕಾರದಿಂದ 49 ಲಕ್ಷ ರೂಪಾಯಿ ರಸ್ತೆ ಅಭಿವೃದ್ಧಿಗಾಗಿ ಮಂಜೂರುಗೊಳಿಸಿದ್ದಾನೆ.
ಬಳಿಕ ರಸ್ತೆಯನ್ನು ಅಗೆಯುವಾಗ, ಮಣ್ಣು ಹಾಕುವಾಗ, ಜಲ್ಲಿ ಸುರಿಯುವಾಗ ಹೀಗೆ ಎಲ್ಲಾ ಕಾಮಗಾರಿಗಳು ನಡೆಯುತ್ತಿರುವಾಗ ರಸ್ತೆಯಲ್ಲೇ ನಿಂತು ಗುತ್ತಿಗೆದಾರರಗೆ, ಅಧಿಕಾರಿಗಳಿಗೆ ನಿರ್ದೇಶನವನ್ನು ನೀಡುತ್ತಿದ್ದ.
ಆದರೆ ತಿಂಗಳ ಹಿಂದೆ ಈತನ ಅಕ್ರಮ ಮರಳುಗಾರಿಕೆ ಅಡ್ಡಿಗೆ ಪೋಲೀಸರು ದಾಳಿ ನಡೆಸಿ ಎಲ್ಲವನ್ನೂ ಜಫ್ತಿ ಮಾಡಿದ್ದಾರೆ.
ಜೊತೆಗೆ ಈತನನ್ನೂ ವಶಕ್ಕೆ ಪಡೆಯಲು ಪೋಲೀಸರು ಹುಡುಕುತ್ತಿದ್ದಾರೆ.
ಇದರಿಂದಾಗಿ ಇದೀಗ ತಲೆ ಮರೆಸಿಕೊಂಡಿರುವ ಯತೀಶ್ ಬಾನಡ್ಕ ತನ್ನ ಉಪಸ್ಥಿತಿಯಿಲ್ಲದೆ ರಸ್ತೆ ಕಾಮಗಾರಿಯೂ ನಡೆಯಬಾರದು ಎಂದು ಅಧಿಕಾರಿಗಳ ಮೇಲೆ ಹಾಗೂ ಗುತ್ತಿಗೆದಾರರ ಮೇಲೆ ಒತ್ತಡ ಹೇರುತ್ತಿದ್ದಾನೆ.
ಈತನ ಕಿರಿಕಿರಿಯಿಂದ ಬೇಸತ್ತ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ರಸ್ತೆಯ ಕಾಮಗಾರಿಯನ್ನು ಅರ್ಧಕ್ಕೇ ಬಿಟ್ಟು ಜಾಗ ಖಾಲಿ ಮಾಡಿದ್ದಾರೆ.
ಇದೀಗ ರಸ್ತೆಯೂ ಇಲ್ಲ, ಅಭಿವೃದ್ಧಿಯೂ ಇಲ್ಲ ಎನ್ನುವ ಪರಿಸ್ಥಿತಿಯಲ್ಲಿ ಸ್ಥಳೀಯ ಗ್ರಾಮಸ್ಥರಿದ್ದಾರೆ.
ಜಲ್ಲಿಕಲ್ಲುಗಳು ರಸ್ತೆಯಿಂದ ಎದ್ದು ಬೈಕ್ ಸವಾರರನ್ನು ರಸ್ತೆಯಲ್ಲೇ ಉರುಳಿಸುತ್ತಿದ್ದರೆ, ಉಳಿದ ಲಘು ವಾಹನಗಳನ್ನು ರಸ್ತೆ ಬದಿ ಚರಂಡಿಗೋ, ತೋಟಕ್ಕೋ ನುಗ್ಗಿಸುತ್ತಿದೆ.
ಅಲ್ಲದೆ ಈ ರಸ್ತೆಯಲ್ಲಿ ಸಂಚರಿಸುವ ಲಾರಿ ಸೇರಿದಂತೆ ಇತರ ಘನವಾಹನಗಳ ಚಕ್ರದಡಿಗೆ ಸಿಕ್ಕಿ ಪಾದಚಾರಿಗಳನ್ನು ಗಾಯಗೊಳಿಸುತ್ತಿದೆ.
ಅಲ್ಲದೆ ಇಡೀ ಪರಿಸರವನ್ನು ಧೂಳುಮಯವಾಗಿಸಿದ್ದು, ಗ್ರಾಮಸ್ಥರು ಜಲ್ಲಿ ಭಾಗ್ಯ ಮತ್ತು ಧೂಳು ಭಾಗ್ಯದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಕೂಡಲೇ ರಸ್ತೆ ಸರಿಪಡಿಸದೇ ಹೋದಲ್ಲಿ ಪ್ರತಿಭಟನೆ ನಡೆಸಲೂ ಸಜ್ಜಾಗಿ ನಿಂತಿದ್ದಾರೆ.