MANGALORE
ಗೃಹ ಸಚಿವ ರಾಮಲಿಂಗಾ ರೆಡ್ಡಿ ಮಂಗಳೂರಿಗೆ
ಗೃಹ ಸಚಿವ ರಾಮಲಿಂಗಾ ರೆಡ್ಡಿ ಮಂಗಳೂರಿಗೆ
ಮಂಗಳೂರು ಸೆಪ್ಟೆಂಬರ್ 20: ರಾಜ್ಯ ನೂತನ ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡ ರಾಮಲಿಂಗಾ ರೆಡ್ಡಿ ಇದೇ ಮೊದಲ ಬಾರಿಗೆ ದಕ್ಷಿಣಕನ್ನಡ ಜಿಲ್ಲೆಗೆ ಭೇಟಿ ನೀಡಿದ್ದಾರೆ. ಇಂದು ಮುಂಜಾನೆ ಮಂಗಳೂರಿಗೆ ಆಗಮಿಸಿದ ಅವರು ಮೂಡಬಿದ್ರೆಗೆ ತೆರಳಿದರು. ಮೂಡಬಿದ್ರೆಯಲ್ಲಿ ನೂತನವಾಗಿ ಆರಂಭಿಸಲಾಗಿರುವ ಅಗ್ನಿಶಾಮಕ ಠಾಣೆಯನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ 15 ಹೊಸ ಅಗ್ನಿಶಾಮಕ ಠಾಣೆಗಳಿಗೆ ಪ್ರಸ್ತಾವನೆ ಬಂದಿದೆ. ಇಲ್ಲಿಯ ಸಮೀಪದ ಮುಲ್ಕಿಯಲ್ಲಿಯೂ ನೂತನ ಅಗ್ನಿಶಾಮಕ ಠಾಣೆ ತೆರೆಯಲಾಗುವುದೆಂದು ಹೇಳಿದರು. ಈ ನಿಟ್ಟಿನಲ್ಲಿ ಈಗಾಗಲೇ ಡಿಜಿಟಲ್ ಸರ್ವೆ ಕಾರ್ಯ ಮುಗಿಸಲಾಗಿದೆ ಎಂದು ಹೇಳಿದ ಅವರು ಮೂಡಬಿದ್ರೆಯಲ್ಲಿ ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಸಂಚಾರಿ ಪೊಲೀಸ್ ಠಾಣೆಯ ಅವಶ್ಯಕತೆ ಬಗ್ಗೆ ಚರ್ಚಿಸಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವಂತೆ ಸ್ಥಳೀಯ ಶಾಸಕ ಅಭಯಚಂದ್ರ ಜೈನ್ ಅವರಿಗೆ ಸೂಚಿಸಿದರು.
ನಂತರ ಮಂಗಳೂರಿಗೆ ಆಗಮಿಸಿದ ರಾಮಲಿಂಗಾರೆಡ್ಡಿ ನಗರದ ನಾಗೋರಿಯಲ್ಲಿ ನೂತನವಾಗಿ ಆರಂಭಿಸಲಾಗಿರುವ ಮಂಗಳೂರು ಸಂಚಾರ ಪೊಲೀಸ್ ಠಾಣೆಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಜೆ.ಆರ್ ಲೋಬೊ ಮತ್ತಿತರರು ಉಪಸ್ಥಿತರಿದ್ದರು.
ನಂತರ ನಾಗೂರಿಯಲ್ಲಿರುವ ಬ್ರಹ್ಮ ಬೈದ್ರಕಳ ಕ್ಷೇತ್ರಕ್ಕೆ ತೆರಳಿ ಕೋಟಿ ಚೆನ್ನಯ್ಯ , ದೇಯಿಬೈದ್ಯೆದಿ ಕ್ಷೇತ್ರಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರದ ಆಡಳಿತ ಮಂಡಳಿ ವತಿಯಿಂದ ಗೃಹಸಚಿವರನ್ನು ಸನ್ಮಾನಿಸಲಾಯಿತು.