Connect with us

    DAKSHINA KANNADA

    ಕೋಳಿ ಅಂಕದ ಜೂಜಿಗಾಗಿ ಪತ್ನಿಯ ತಲೆ ಒಡೆದ ಭೂಪ

    ಕೋಳಿ ಅಂಕದ ಜೂಜಿಗಾಗಿ ಪತ್ನಿಯ ತಲೆ ಒಡೆದ ಭೂಪ

    ಪುತ್ತೂರು, ಮಾರ್ಚ್ 12: ಕೋಳಿ ಅಂಕಕ್ಕೆ ಹೋಗಿ ಜೂಜಾಡುವುದನ್ನು ವಿರೋಧಿಸಿದ ಪತ್ನಿಗೆ ಪತಿರಾಯನೊಬ್ಬ ಕುರ್ಚಿಯಿಂದಲೇ ತಲೆಗೆ ಹಲ್ಲೆ ನಡೆಸಿದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡದಲ್ಲಿ ನಡೆದಿದೆ.

    ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ಪತ್ನಿ ವನಿತಾ ಇದೀಗ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ತಲೆಗೆ ಗಂಭೀರ ಗಾಯವಾದ ಹಿನ್ನಲೆಯಲ್ಲಿ ವನಿತಾ ಶನಿವಾರದಂತೆ ಕೊಕ್ಕಡದ ಸಮುದಾಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳಿದ್ದರು.

    ಅಲ್ಲಿಂದ ಔಷಧಿಗಳನ್ನು ಪಡೆದು ಮನೆಗೆ ತೆರಳುವ ಸಂದರ್ಭದಲ್ಲಿ ಪ್ರಜ್ಞೆ ತಪ್ಪಿ ದಾರಿಯಲ್ಲೇ ಬಿದ್ದಿದ್ದರು.

    ಆ ಸಂದರ್ಭದಲ್ಲಿ ಸ್ಥಳೀಯರು ಆಕೆಯನ್ನು 108 ಆಂಬ್ಯುಲೆನ್ಸ್ ಮೂಲಕ ಪುತ್ತೂರು ಸರಕಾರಿ ಆಸ್ಪತ್ರೆಗೆ ಸೇರಿಸಿದ್ದರು.

    ಈ ಕುರಿತು ಆಸ್ಪತ್ರೆಯಿಂದ ಸಂಬಂಧಪಟ್ಟ ಪೋಲೀಸ್ ಠಾಣೆಗೆ ಮಾಹಿತಿಯನ್ನು ರವಾನಿಸಲಾಗಿದ್ದರೂ, ಪೋಲೀಸರು ಮಾತ್ರ ಇಂದಿನವರೆಗೂ ಹಲ್ಲೆಗೊಳಗಾದ ಮಹಿಳೆಯ ವಿಚಾರಣೆ ನಡೆಸಲು ಆಸ್ಪತ್ರೆಗೆ ಭೇಟಿ ನೀಡಿಲ್ಲ.

    ವನಿತಾ ಪತಿ ಅಚ್ಚುತನಿಗೆ ಕೋಳಿ ಅಂಕಕ್ಕೆ ಹೋಗುವ ಚಾಳಿಯಿದ್ದು, ಪ್ರತಿದಿನ ಎಲ್ಲೆಂದರಲ್ಲಿ ನಡೆಯುವ ಕೋಳಿ ಅಂಕಕ್ಕೆ ಹೋಗಿ ಜೂಜಾಡುವುದು ಈತನ ಕೆಲಸವಾಗಿತ್ತು.

    ಅದಕ್ಕಾಗಿ ಮನೆಯಲ್ಲಿದ್ದ ಸಾಮಾಗ್ರಿಗಳನ್ನು ಕೊಂಡೊಯ್ಯುತ್ತಿದ್ದು, ಪತ್ನಿ ವನಿತಾಳ ಚಿನ್ನವನ್ನೂ ಕೋಳಿ ಅಂಕದ ಜೂಜಿಗಾಗಿ ಅಡವಿಟ್ಟಿದ್ದ.

    ಚಿನ್ನವನ್ನು ಬಿಡಿಸಿಕೊಡುವಂತೆ ಅಚ್ಚುತನಲ್ಲಿ ಕೇಳಿದ ಸಂದರ್ಭದಲ್ಲಿ ಆತ ಸಿಟ್ಟಿನಿಂದ ಕುರ್ಚಿಯಿಂದಲೇ ಆಕೆಯ ತಲೆಗೆ ಹಲ್ಲೆ ನಡೆಸಿದ್ದಾನೆ.

    ಇತ್ತೀಚಿನ ದಿನಗಳಲ್ಲಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೋಳಿ ಅಂಕಗಳು ಹೆಚ್ಚಾಗುತ್ತಿದ್ದು, ಲಕ್ಷಗಟ್ಟಲೆ ಜೂಜು ಈ ಅಂಕದ ಮೂಲಕ ನಡೆಯುತ್ತಿದೆ.

    ಈ ಕಾರಣಕ್ಕಾಗಿಯೇ ಜೂಜಿನ ಹಣಕ್ಕಾಗಿ ಜನ ಈ ರೀತಿಯ ಅಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ ಎನ್ನುವ ಆರೋಪಗಳೂ ಕೇಳಿ ಬರುತ್ತಿದೆ.

    ಪೋಲೀಸರ ಸುಪರ್ದಿನಲ್ಲೇ ಕೋಳಿ ಅಂಕಗಳು ನಿರಂತರವಾಗಿ ನಡೆಯುತ್ತಿದ್ದು, ಇದೀಗ ಹಲವು ಬಡ ಕುಟುಂಬಗಳು ಈ ಕೋಳಿ ಅಂಕದಲ್ಲಿ ನಡೆಯುತ್ತಿರುವ ಜೂಜಿಗೆ ಬಲಿಯಾದ ಕಾರಣ ಕುಟುಂಬಗಳೂ ಒಡೆಯುತ್ತಿವೆ.

    ರೌಡಿ ಪಟ್ಟವನ್ನು ಕಟ್ಟಿಕೊಂಡಿರುವ ಕೆಲವು ಮಾಜಿಗಳು ಇಂದು ರಾಜಾರೋಷವಾಗಿ ಕೋಳಿ ಅಂಕಗಳನ್ನು ನಡೆಸುತ್ತಿದ್ದು, ಈ ಎಲ್ಲದರ ಮಾಹಿತಿ ಪೋಲೀಸರಿಗೆ ಇದ್ದರೂ, ಕಮಿಷನ್ ಬರದ ಕೋಳಿ ಅಂಕಗಳಿಗೆ ಮಾತ್ರ ದಾಳಿ ಮಾಡುವ ಪ್ರಕರಣಗಳು ಮಾತ್ರ ಕೆಲವೊಮ್ಮೆ ಕೇಳಿ ಬರುತ್ತಿದೆ.

     

    Share Information
    Advertisement
    Click to comment

    Leave a Reply

    Your email address will not be published. Required fields are marked *