DAKSHINA KANNADA
ಕೋಮು ಸೌಹಾರ್ದಕ್ಕೇ ಶೀಘ್ರ ಶಾಂತಿ ಸಭೆ : ರಮಾನಾಥ ರೈ
ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಸೌಹಾರ್ದ ಕಾಪಾಡಲು ಶೀಘ್ರದಲ್ಲೇ ಶಾಂತಿ ಸಭೆ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ರಮಾನಾಥ ರೈ ತಿಳಿಸಿದರು.
‘ಜಿಲ್ಲಾಧಿಕಾರಿ ದಿನಾಂಕ ನಿಗದಿ ಮಾಡಲಿದ್ದಾರೆ. ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಸಂಸದೆ ಶೋಭಾ ಕರಂದ್ಲಾಜೆ ಸೇರಿ ಎಲ್ಲ ಜನಪ್ರತಿನಿಧಿಗಳು, ಸಂಘ–ಸಂಸ್ಥೆಗಳ ಮುಖಂಡರನ್ನು ಸಭೆಗೆ ಕರೆಯಲಾಗುವುದು. ನಮ್ಮ ತಪ್ಪನ್ನು ಅವರು ಹೇಳಲಿ, ಅವರ ತಪ್ಪನ್ನು ನಾವು ಹೇಳುತ್ತೇವೆ’ ಎಂದರು.
‘ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ಮನೆಗೆ ಕರೆಸಿ ಮಾತನಾಡಿದ್ದಕ್ಕೇ ಘರ್ಷಣೆ ಆರಂಭ ಆಯಿತು ಎನ್ನುವುದು ತಪ್ಪು. ಅದಕ್ಕೂ ಮುನ್ನ ನಮ್ಮ ಪಕ್ಷದ ಕಾರ್ಯಕರ್ತ ಕರೋಪಾಡಿ ಜಲೀಲ್ ಹತ್ಯೆ ಆಗಿದೆ. ಯಾರು ಕೊಲೆ ಮಾಡಿದ್ದಾರೋ ಅವರನ್ನು ಬಂಧಿಸಿ ಎಂದಷ್ಟೇ ಹೇಳಿದ್ದೆ’ ಎಂದು ಸ್ಪಷ್ಟಪಡಿಸಿದರು.
‘ಯಾರೇ ಸತ್ತರೂ ನಮಗೆ ನೋವಿದೆ. ಆರ್‌ಎಸ್‌್ಎಸ್‌್ ಕಾರ್ಯಕರ್ತ ಶರತ್ ಶವಯಾತ್ರೆಯಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಹೊತ್ತು ಕುಣಿದರು. ಅವರು ನಗುತ್ತ ಎಲ್ಲರತ್ತ ಕೈ ಬೀಸಿದ್ದಾರೆ. ಶವಯಾತ್ರೆ ಎಂದರೆ ಇವರಿಗೆ ವಿಜಯೋತ್ಸವವೇ’ ಎಂದು ಪ್ರಶ್ನಿಸಿದರು.
‘ನಿಷೇಧಾಜ್ಞೆ ಅವರಿಗೆ ಲೆಕ್ಕಕ್ಕೇ ಇಲ್ಲ. ನಮ್ಮ ಜಿಲ್ಲೆಯಲ್ಲಿ ಪ್ರಚೋದನಾಕಾರಿ ಭಾಷಣ ಮಾಡುವುದು ಯಾರು ಎಂಬುದು ಎಲ್ಲರಿಗೂ ಗೊತ್ತಿದೆ. ಸಂಸದೆ ಶೋಭಾ ಕರಂದ್ಲಾಜೆ ಉಡುಪಿ ಸಂಸದರು. ಈ ವಿಚಾರದಲ್ಲಿ ಆಧಾರ ರಹಿತವಾಗಿ ಮಾತನಾಡಿ ಬೆಂಕಿಗೆ ತುಪ್ಪ ಸುರಿಯುತ್ತಿದ್ದಾರೆ. ಬೆಂಗಳೂರನ್ನು ಪ್ರತಿನಿಧಿಸುವ ಸಂಸದ ಸದಾನಂದಗೌಡ ಕೂಡ ಕುಮ್ಮಕ್ಕು ನೀಡುತ್ತಿದ್ದಾರೆ’ ಎಂದು ಆರೋಪಿಸಿದರು.
‘ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತ ಮತೀಯವಾದವನ್ನು ನಾನು ಹಿಂದಿನಿಂದಲೂ ವಿರೋಧಿಸಿಕೊಂಡೇ ಬಂದಿದ್ದೇನೆ. ಎರಡೂ ಕಡೆಯವರ ಕೊಲೆಗಳಾಗಿವೆ. ಒಂದು ಕಡೆ ಭಜರಂಗದಳ, ಇನ್ನೊಂದು ಕಡೆ ಎಸ್‌ಡಿಪಿಐ ಕಾರ್ಯಕರ್ತರಿದ್ದಾರೆ. ಯಾವುದೇ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಇಲ್ಲ’ ಎಂದು ಸ್ಪಷ್ಟಪಡಿಸಿದರು.