PUTTUR
ಕೇರಳಕ್ಕೆ ಅಕ್ರಮ ಗೋಸಾಗಾಟ,40 ಜಾನುವಾರುಗಳ ರಕ್ಷಣೆ
ಪುತ್ತೂರು,ಆಗಸ್ಟ್ 21:ಕೇರಳಕ್ಕೆ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಒಂದು 407 ಲಾರಿ ಹಾಗೂ ಕಂಟೈನರ್ ಲಾರಿಯನ್ನು ನೆಲ್ಯಾಡಿ ಪೋಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹಾಸನದಿಂದ ಕೇರಳದ ಕಾಸರಗೋಡಿಗೆ ಸಾಗಿಸುತ್ತಿದ್ದ ಜಾನುವಾರುಗಳ ಬಗ್ಗೆ ಖಚಿತ ಮಾಹಿತಿ ಪಡೆದ ನೆಲ್ಯಾಡಿ ಔಟ್ ಪೋಸ್ಟ್ ಪೋಲೀಸರು ಎರಡು ಲಾರಿಗಳಿಂದ ಸುಮಾರು 40 ಜಾನುವಾರುಗಳನ್ನು ವಶಕ್ಕೆ ಪಡೆದಿದ್ದು, ಇಬ್ಬರು ಲಾರಿ ಚಾಲಕರನ್ನು ಬಂಧಿಸಿದ್ದಾರೆ. ಲಾರಿಗಳಲ್ಲಿ ಜಾನುವಾರುಗಳನ್ನು ಅಮಾನುಷವಾಗಿ ಲೋಡ್ ಮಾಡಲಾಗಿದ್ದು, ಇದೀಗ ಎಲ್ಲಾ ಜಾನುವಾರುಗಳನ್ನು ನೆಲ್ಯಾಡಿ ಔಟ್ ಪೋಸ್ಟ್ ನ ಆವರಣದಲ್ಲಿ ಇರಿಸಲಾಗಿದೆ. ಎಲ್ಲಾ ಜಾನುವಾರುಗಳಿಗೆ ಮೇವು ಹಾಗೂ ನೀರು ನೀಡುವ ಕಾರ್ಯದಲ್ಲಿ ಇದೀಗ ಪೋಲೀಸರು ತೊಡಗಿದ್ದಾರೆ. ಹಾಸನ , ಸಕಲೇಶಪುರ ಕಡೆಯಿಂದ ಕೇರಳ ರಾಜ್ಯಕ್ಕೆ ನಿರಂತರವಾಗಿ ಅಕ್ರಮ ಗೋ ಸಾಗಾಟ ನಡೆಯುತ್ತಿದ್ದು, ಕೆಲವು ಸಂದರ್ಭಗಳಲ್ಲಿ ಇದೇ ವಿಚಾರವಾಗಿ ಜಿಲ್ಲೆಯಲ್ಲಿ ಸಂಘರ್ಷಗಳೂ ನಡೆಯುತ್ತಿದೆ.