UDUPI
ಕೆಎಸ್‍ಆರ್‍ಟಿಸಿ ಸೌಲಭ್ಯ ಒದಗಿಸಲು ಕ್ರಮ : ಜಿಲ್ಲಾಧಿಕಾರಿ
ಉಡುಪಿ, ಆಗಸ್ಟ್ 30 : ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೆ ಅಗತ್ಯವಿರುವೆಡೆಗಳಲ್ಲಿ ಸರ್ಕಾರಿ ಬಸ್ ಸೌಲಭ್ಯ ಒದಗಿಸುವ ಕುರಿತಂತೆ ಪರಿಶೀಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿಫ್ರಾನಿಸ್ ತಿಳಿಸಿದ್ದಾರೆ.
ಅವರು ಬುಧವಾರ, ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಸಾರಿಗೆ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾಪು- ಮೂಡು ಬೆಳ್ಳೆ ಮಾರ್ಗದಲ್ಲಿ ಸರ್ಕಾರಿ ಬಸ್ ಸೌಲಭ್ಯ ಒದಗಿಸುವಂತೆ ಶಿವಾಜಿ ಸುವರ್ಣ ಎಂಬುವವರು ಕೋರಿದರು, ಸರ್ಕಾರಿ ಬಸ್ ದರ ಕಡಿಮೆ ಇದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಳಸುತ್ತಿದ್ದು ಅನುಕೂಲವಾಗಿದೆ ಎಂದು ಸಂಜೀವ ಶೆಟ್ಟಿ ತಿಳಿಸಿದರು.
ಸರ್ಕಾರಿ ಬಸ್‍ಗಳು ಪರ್ಮಿಟ್ ಇಲ್ಲದ ಕಡೆಗಳಲ್ಲಿ ಮತ್ತು ನಿರ್ದಿಷ್ಟ ಸಮಯ ಪಾಲನೆ ಇಲ್ಲದೆ ಬಸ್ ಓಡಿಸುತ್ತಿದು, ಇದರಿಂದ ಖಾಸಗಿ ಯವರಿಗೆ ತೊಂದರೆಯಾಗಿದೆ ಇದನ್ನು ಸರಿಪಡಿಸುವಂತೆ ಖಾಸಗಿ ಬಸ್ ಮಾಲೀಕರು ಕೋರಿದರು, ಇದಕ್ಕೆ ಉತ್ತರಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ ಎಂ ಪಾಟೀಲ್ ಎಲ್ಲಾ ಬಸ್ ಗಳು ಒಂದು ವಾರದ ಒಳಗೆ ತಮ್ಮ ಬಸ್ ಗಳ ಮೇಲೆ ತಮಗೆ ನೀಡಿರುವ ಪರ್ಮಿಟ್ ಸಂಖ್ಯೆ, ಮಾರ್ಗ ಮತ್ತು ಸಮಯದ ಕುರಿತು ಮಾಹಿತಿ ಅಳವಡಿಸುವಂತೆ ಹಾಗೂ ಇದನ್ನು ಮೀರಿ ಸಂಚರಿಸುವ ವಾಹನಗಳ ಕುರಿತು ದೂರು ಸಲ್ಲಿಸುವಂತೆ ತಿಳಿಸಿದರು.
ಕುಂದಾಪುರ ಬೈಂದೂರು ಮಧ್ಯೆ ಸಂಚರಿಸುವ ಸರ್ಕಾರಿ ಬಸ್‍ಗಳು ಸಮಯ ಪಾಲನೆ ಮಾಡುತ್ತಿಲ್ಲ ಮತ್ತು ಪರ್ಮಿಟ್ ಇಲ್ಲದೆ ಸಂಚರಿಸುತ್ತಿರುವ ಕುರಿತಂತೆ ಖಾಸಗಿ ಬಸ್ ಮಾಲೀಕ ಸುಧಾಕರ ಶೆಟ್ಟಿ ತಿಳಿಸಿದರು, ಈ ಕುರಿತಂತೆ ಈ ಮಾರ್ಗದಲ್ಲಿ ಸಂಚರಿಸುವ ಪರ್ಮಿಟ್ ಹೊಂದಿರುವ ಎಲ್ಲಾ ಬಸ್ ಮಾಲಕರ ಮತ್ತು ಕೆಎಸ್‍ಆರ್‍ಟಿಸಿ ಅಧಿಕಾರಿಗಳ ಸಭೆಯನ್ನು ಕುಂದಾಪುರ ಬಸ್ ಡಿಪೋದಲ್ಲಿ ನಡೆಸಿ ಸಮಸ್ಯೆಯನ್ನು ಬಗೆಹರಿಸುವಂತೆ ಕೆಎಸ್‍ಆರ್‍ಟಿಸಿ ಅಧಿಕಾರಿ ಜೈಶಾಂತ್ ಕುಮಾರ್ ಅವರಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಸಭೆಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ (ಪ್ರಭಾರ) ರಾಮಕೃಷ್ಣ ರೈ ಉಪಸ್ಥಿತರಿದ್ದರು.