Connect with us

DAKSHINA KANNADA

ಕರಾವಳಿಯಾದ್ಯಂತ ಸಂಭ್ರಮದ ಗಣೇಶೋತ್ಸವ

ಮಂಗಳೂರು,ಆಗಸ್ಟ್ 25: ಕರಾವಳಿ ಜಿಲ್ಲೆಯಾದ್ಯಂತ ಇಂದು ವಿಘ್ನನಿವಾರಕ ಗಣೇಶನ ಚತುರ್ಥಿಯನ್ನು ವಿಜ್ರಂಭಣೆಯಿಂದ ಆಚರಿಸಲಾಗುತ್ತಿದೆ. ದಕ್ಷಿಣಕನ್ನಡ ಜಿಲ್ಲೆಯ 375 ಕಡೆ ಸಾರ್ವಜನಿಕ ಗಣೇಶೋತ್ಸವವನ್ನು ವಿವಿಧ ಸಂಘಸಂಸ್ಥೆಗಳ ಆಶ್ರಯದಲ್ಲಿ ನಡೆಯುತ್ತಿವೆ. ಮಂಗಳೂರಿನ ಕೇಂದ್ರ ಮೈದಾನದಲ್ಲಿ ಹಿಂದೂ ಯುವಸೇನೆಯ ಆಶ್ರಯದಲ್ಲಿ ನಡೆಯುತ್ತಿರುವ ಸಾರ್ವಜನಿಕ ಗಣೇಶೋತ್ಸವಕ್ಕೆ 25 ವರ್ಷದ ಬೆಳ್ಳಿಹಬ್ಬದ ಸಂಭ್ರಮ. ಈ ಪ್ರಯಕ್ತ ಇಂದು ಗಣೇಶನ ವಿಗ್ರಹವನ್ನು ಪ್ರತಿಷ್ಟಾಪಿಸಲಾಯಿತು. ಗಣಹೋಮ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮಗಳನ್ನು ಈ ಪ್ರಯಕ್ತ ಹಮ್ಮಿಕೊಳ್ಳಲಾಗಿತ್ತು. ಕರಾವಳಿ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಗಣೇಶ್ ರಾವ್ ಉತ್ಸವಕ್ಕೆ ಚಾಲನೆ ನೀಡಿದರು. 25 ನೇ ವರ್ಷದ ಅಂಗವಾಗಿ ದಿ.ಗುಣಕರ ಶೆಟ್ಟಿಯವರ ನೆನಪಿಗೋಸ್ಕರ ಅತ್ಯಾಧುನಿಕ ಅಂಬ್ಯುಲೆನ್ಸ್ ಸೇವೆಯನ್ನು ಲೋಕಾರ್ಪಣೆ ಮಾಡಲಾಯಿತು.
ಬಂಟ್ಸ್ ಹಾಸ್ಟಲ್ ನ ಒಂಕಾರ ನಗರದಲ್ಲೂ ಗಣೇಶೋತ್ಸವ ಪ್ರಯುಕ್ತ ಧ್ವಜಾರೋಹಣ ಹಾಗೂ ತೆನೆಹಬ್ಬ ಹಾಗೂ ಧಾರ್ಮಿಕ ಸಭೆಗಳನ್ನು ನಡೆಸಲಾಯಿತು. ಮಂಗಳೂರಿನ ಪ್ರತಾಪ್ ನಗರದ ಸಂಘನಿಕೇತನ,ರಥಬೀದಿ ವೆಂಕಟರಮಣ ದೇವಸ್ಥಾನದ ಗಣಪ, ಕೆ.ಎಂ.ಸಿ, ಕರಂಗಲ್ಪಾಡಿ ಮಾರುಕಟ್ಟೆ, ಮರೋಳಿ, ಮಂಗಳೂರು ಹಾಲು ಉತ್ಪಾದಕರ ಸಂಘ ಕುಲಶೇಖರ, ಸಿದ್ಧಿವಿನಾಯಕ ದೇವಸ್ಥಾನ ಬಿಕರ್ನಕಟ್ಟೆ, ಬಿಜೈ ಹೀಗೆ ನಗರದ ಹತ್ತು ಹಲವಾರು ಕಡೆಗಳಲ್ಲಿ ಸಾರ್ವಜನಿಕ ಗಣೇಶೋತ್ಸವಗಳನ್ನು ಆಯೋಜಿಸಲಾಯಿತು. ಮಂಗಳೂರು ನಗರ ಹೊರತುಪಡಿಸಿ ಜಿಲ್ಲೆಯ ಪುತ್ತೂರ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲೂ ಗಣಪನ ವಿಗ್ರಹ ಪ್ರತಿಷ್ಟಾಪನೆ ಮಾಡಲಾಯಿತು.ಕಿಲ್ಲೆ ಮೈದಾನದಲ್ಲಿ ಈ ಬಾರಿ 60 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವನ್ನು ನಡೆಸಲಾಗುತ್ತಿದ್ದು, ಈ ಪ್ರಯುಕ್ತ ಹಲವು ಧಾರ್ಮಿಕ ವಿಧಿವಿಧಾನಗಳೂ ನಡೆಯಿತು. ಇದೇ ಪ್ರಕಾರ ಫಿಲೋಮಿನಾ ಕಾಲೇಜಿನಲ್ಲೂ , ವಿವೇಕಾನಂದ ಕಾಲೇಜಿನಲ್ಲೂ ಗಣೇಶನ ವಿಗ್ರಹದ ಪ್ರತಿಷ್ಟಾಪನೆ ಮಾಡಲಾಯಿತು.ಒಟ್ಟಾರೆಯಾಗಿ ವಿಘ್ನ ನಿವಾರಕನಾದ ಗಣೇಶೋತ್ಸವ ಎಲ್ಲಾ ಕಡೆ ನೆಮ್ಮದಿ ಮತ್ತು ಶಾಂತಿ ತರಲಿ ಎಂಬುವುದೇ ಎಲ್ಲರ ಪ್ರಾರ್ಥನೆ..

Share Information
Continue Reading
Advertisement
Click to comment

Leave a Reply

Your email address will not be published. Required fields are marked *