DAKSHINA KANNADA
ಐದು ವರ್ಷಗಳ ಹಿಂದಿನ ಗೂಂಡಾ ಪ್ರಕರಣ ಪುನರ್ ಪರಿಶೀಲನೆ… ಡಿ.ಜಿ.ಪಿ , ಆರ್.ಕೆ.ದತ್ತಾ

ಮಂಗಳೂರು. ಜುಲೈ 14: ಮಂಗಳೂರು ಕಮಿಷನರೇಟ್ ಹಾಗೂ ದಕ್ಷಿಣಕನ್ನಡ ಜಿಲ್ಲಾ ಪೋಲೀಸ್ ವ್ಯಾಪ್ತಿಗೆ ಬರುವ ಐದು ವರ್ಷ ಹಿಂದಿನ ಎಲ್ಲಾ ಗೂಂಡಾ ಪ್ರಕರಣಗಳ ಪುನರ್ ಪರಿಶೀಲನೆ ನಡೆಸಲಾಗುವುದು ಎಂದು ಪೋಲೀಸ್ ಮಹಾನಿರ್ದೇಶಕ ಆರ್.ಕೆ.ದತ್ತಾ ಹೇಳಿದರು.
ಮಂಗಳೂರಿನಲ್ಲಿ ಮಾಧ್ಯಮಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಮಾಧ್ಯಗಳಲ್ಲಿ ಬರುವಂತಹ ಯಾವುದೇ ಭಯದ ವಾತಾವರಣವಿಲ್ಲ. ಜಿಲ್ಲೆ ಸಂಪೂರ್ಣ ಸಹಜಸ್ಥಿತಿಯಲ್ಲಿದ್ದು, ಗಲಭೆ ಪೀಡಿತ ಬಂಟ್ವಾಳ, ವಿಟ್ಲ ಹಾಗೂ ಇತರ ಪ್ರದೇಶಗಳಿಗೆ ಸ್ವತಹ ಭೇಟಿ ನೀಡಿ ಪರಿಶೀಲನೆ ನಡೆಸಿರುವುದಾಗಿ ಹೇಳಿದ ಅವರು ಇತ್ತೀಚೆಗೆ ಜಿಲ್ಲೆಯಲ್ಲಿ ನಡೆದಂತಹ ಎಲ್ಲಾ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲೀಸರು ಆರೋಪಿಗಳನ್ನು ಬಂಧಿಸಿದ್ದು, ಆರ್.ಎಸ್.ಎಸ್ ಕಾರ್ಯಕರ್ತ ಶರತ್ ಕೊಲೆ ಆರೋಪಿಗಳನ್ನೂ ಕೂಡಲೇ ಬಂಧಿಸುವುದಾಗಿ ಹೇಳಿದ ಅವರು ಶರತ್ ಕೊಲೆಗೆ ಸಂಬಂಧಿಸಿದಂತೆ ಕೆಲವು ಮಹತ್ತರ ಸುಳಿವು ಪೋಲೀಸರಿಗೆ ಲಭ್ಯವಾಗಿದ್ದು, ಕೂಡಲೇ ಆರೋಪಿಗಳನ್ನು ಬಂಧಿಸುವುದಾಗಿ ಅವರು ವಿಶ್ವಾಸ ವ್ಯಕ್ತಪಡಿಸಿದರು. ಶರತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲೀಸ್ ವ್ಯವಸ್ಥೆಯಲ್ಲಿ ಕೊಂಚ ನ್ಯೂನ್ಯತೆಗಳಿರುವುದನ್ನು ಒಪ್ಪಿಕೊಂಡ ಅವರು ಕಳೆದ ಐದು ವರ್ಷಗಳಲ್ಲಿ ಮಂಗಳೂರು ಕಮಿಷನರೇಟ್ ಹಾಗೂ ದಕ್ಷಿಣಕನ್ನಡ ಜಿಲ್ಲಾ ಪೋಲೀಸ್ ವ್ಯಾಪ್ತಿಯಲ್ಲಿ ನಡೆದಿರುವ ಗೂಂಡಾ ಪ್ರಕರಣಗಳೆಲ್ಲವನ್ನೂ ಪುನರ್ ಪರಿಶೀಲನೆ ನಡೆಸುವಂತೆ ಪೋಲೀಸರಿಗೆ ಈಗಾಗಲೇ ಆದೇಶ ನೀಡಿರುವುದಾಗಿ ಹೇಳಿದರು. ಇಂಥ ಪ್ರಕರಣದಲ್ಲಿ ತೊಡಗಿಕೊಂಡವರು ಇದೀಗ ಏನು ಮಾಡುತ್ತಿದ್ದಾರೆ ಹಾಗೂ ಇಂಥಹ ಪ್ರಕರಣಗಳಲ್ಲಿ ಪುನಹ ತೊಡಗಿಸಿಕೊಂಡಿದ್ದರೆ ಅಂಥವರ ಮೇಲೆ ಗೂಂಡಾ ಕಾಯ್ದೆ, ಗಡಿಪಾರು ಹಾಗೂ ಕೋಕಾ ಕಾಯ್ದೆಯ ಮೂಲಕ ಕ್ರಮ ಜರಗಿಸುವಂತೆಯೂ ಪೋಲೀಸರಿಗೆ ನಿರ್ದೇಶಿಸಿರುವುದಾಗಿ ಅವರು ಇದೇ ಸಂದರ್ಭದಲ್ಲಿ ಹೇಳಿದರು. ಜಿಲ್ಲೆಯಲ್ಲಿ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ವ್ಯಕ್ತಿಗಳು ಮಾಧ್ಯಮಗಳಲ್ಲಿ ಉದ್ರೇಕಕಾರಿಯಾದಂತಹ ಹೇಳಿಕೆಗಳನ್ನು ನೀಡುತ್ತಿದ್ದು, ಇಂಥ ಹೇಳಿಕೆಗಳನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ಪೋಲೀಸ್ ಮಹಾನಿರ್ದೇಶಕರು ಇದೇ ಸಂದರ್ಭದಲ್ಲಿ ಮನವಿ ಮಾಡಿದರು. ತಪ್ಪು ಮಾಡದವರನ್ನು ಪ್ರಕರಣದಲ್ಲಿ ಸಿಲುಕಿಸುವಂತಹ ವ್ಯವಸ್ಥೆಗೆ ಅವಕಾಶ ನೀಡುವುದಿಲ್ಲ ಎಂದ ಅವರು ಇದೇ ಕಾರಣಕ್ಕಾಗಿ ಶರತ್ ಹತ್ಯೆಯ ಆರೋಪಿಗಳ ಪತ್ತೆ ಕಾರ್ಯ ವಿಳಂಬವಾಗಿದೆ ಎಂದರು.