LATEST NEWS
ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನಲ್ಲಿ ಭಾರೀ ಅವ್ಯವಹಾರ, ಸಮಗ್ರ ತನಿಖೆಗೆ ಡಿವೈಎಫ್ಐ ಆಗ್ರಹ
ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನಲ್ಲಿ ಭಾರೀ ಅವ್ಯವಹಾರ, ಸಮಗ್ರ ತನಿಖೆಗೆ ಡಿವೈಎಫ್ಐ ಆಗ್ರಹ
ಮಂಗಳೂರು, ಮಾರ್ಚ್ 22: ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ದಕ್ಷಿಣಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (SCDCC) ನಲ್ಲಿ ಭಾರೀ ಅವ್ಯವಹಾರ ನಡೆದಿದ್ದು, ಈ ಬಗ್ಗೆ ಕೂಡಲೇ ಸಮಗ್ರ ತನಿಖೆ ನಡೆಸಬೇಕೆಂದು ಡಿವೈಎಫ್ಐ ಆಗ್ರಹಿಸಿದೆ.
ಪ್ರತಿ ಸಹಕಾರಿ ಬ್ಯಾಂಕಿನ ಅಧ್ಯಕ್ಷರ ಆಯ್ಕೆ 6 ವರ್ಷಗಳಿಗೊಮ್ಮೆ ಕಡ್ಡಾಯ ಬದಲಾವಣೆ ಎಂಬ ಕಾನೂನು ಇದ್ದರೂ, 1998 ರ ಸಹಕಾರಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಪ್ರಸ್ತುತ ಬ್ಯಾಂಕಿನ ಅಧ್ಯಕ್ಷರಾಗಿರುವ ಎಂ.ಎನ್.ರಾಜೇಂದ್ರ ಕುಮಾರ್ ಕಳೆದ 25 ವರ್ಷಗಳಿಂದ ನಿರಂತರವಾಗಿ ಹುದ್ದೆಯಲ್ಲಿರುವ ಮೂಲಕ ಸರ್ವಾಧಿಕಾರಿ ಧೋರಣೆಯನ್ನು ತಳೆಯುತ್ತಿದ್ದಾರೆ ಎಂದು ಡಿವೈಎಫ್ಐ ಆರೋಪಿಸಿದೆ.
ಬ್ಯಾಂಕಿನ ಕಾರ್ಯವ್ಯಾಪ್ತಿಯನ್ನು ಉಲ್ಲಂಘಿಸಿ ರಾಜ್ಯದ ಹಲವಾರು ಸಕ್ಕರೆ ಕಾರ್ಖಾನೆಗಳು ಸೇರಿದಂತೆ ರಾಜ್ಯದಾದ್ಯಂತ ಕೋಟ್ಯಾಂತರ ಸಾಲ ನೀಡುವುದು ಆರ್.ಬಿ.ಐ ಕಾನೂನಿನ ವಿರುದ್ಧವಾಗಿದೆ.
ಅಧ್ಯಕ್ಷರಾಗಿರುವ ಎಂ.ಎನ್.ರಾಜೇಂದ್ರ ಕುಮಾರ್ ಸ್ವತಹ ರಿಯಲ್ ಎಸ್ಟೇಟ್ ದಂಧೆ ನಡೆಸಿ ಅದಕ್ಕೂ ಬ್ಯಾಂಕಿನಿಂದ ಸಾಲ ಪಡೆಯುವ ಮೂಲಕ ನಬಾರ್ಡ್ ನಿರ್ದೇಶನವನ್ನೂ ಉಲ್ಲಂಘಿಸಿದ್ದಾರೆ.
ಮಾತ್ರವಲ್ಲದೆ ರೈತರ ಬೆಳೆಗಳ ಮಾರಾಟ ಮಾಡುವ ಪ್ರಮುಖ ಸಂಸ್ಥೆಯಾದ SKACMS ಸ್ಥಿರಾಸ್ತಿಯ ಮಾರುಕಟ್ಟೆ ಮೌಲ್ಯ 30 ಕೋಟಿ ಆಗಿದ್ದು, ಅಧ್ಯಕ್ಷರು ನಕಲಿ ಸಂಸ್ಥೆಯನ್ನು ರಚಿಸಿ ಈ ಆಸ್ತಿಯನ್ನೂ 8 ಕೋಟಿ ರೂಪಾಯಿಗೆ ನೊಂದಣಿ ಮಾಡುವ ಮೂಲಕ ಭಾರೀ ದೊಡ್ಡ ಹಗರಣಕ್ಕೂ ಕಾರಣರಾಗಿದ್ದಾರೆ ಎಂದು ಆರೋಪಿಸಿದೆ.
ಸರಕಾರ ಕೂಡಲೇ ಈ ಬಗ್ಗೆ ಗಮನ ಹರಿಸಿ ಬ್ಯಾಂಕಿನ ಸಂಪೂರ್ಣ ವ್ಯವಹಾರದ ಬಗ್ಗೆ ಕೂಲಂಕುಶ ತನಿಖೆ ನಡೆಸಬೇಕು.
ಕೂಡಲೇ ಸ್ಪಂದನೆ ದೊರೆಯದೇ ಇದ್ದಲ್ಲಿ ಡಿವೈಎಫ್ಐ ವತಿಯಿಂದ SCDCC ಬ್ಯಾಂಕ್ ಉಳಿಸಿ ಆಂದೋಲನವನ್ನು ಹಮ್ಮಿಕೊಳ್ಳಲಾಗುವುದು ಎಂದು ಅದು ಎಚ್ಚರಿಸಿದೆ.