UDUPI
ವಿಕಲಚೇತನರಿಗೆ ಜಿಲ್ಲಾಡಳಿತದಿಂದ ಉದ್ಯೋಗವಕಾಶ : ಜಿಲ್ಲಾಧಿಕಾರಿ ಪ್ರಿಯಾಂಕ
ಉಡುಪಿ,ಆಗಸ್ಟ್ 02: ಜಿಲ್ಲೆಯಲ್ಲಿನ ವಿಕಲಚೇತನರಿಗೆ ಜಿಲ್ಲಾಡಳಿತದಿಂದ ಉದ್ಯೋಗವಕಾಶ ಒಗದಿಸುವ ಕುರಿತು ಚಿಂತನೆ ನಡೆದಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.
ಅವರು ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ, ಇಂಜಿನಿಯರ್ಸ್ ಇಂಡಿಯಾ ಲಿಮಿಟೆಡ್, ಅಲಿಮ್ಕೋ ಬೆಂಗಳೂರು, ಭಾರತೀಯ ರೆಡ್‍ಕ್ರಾಸ್ ಸಂಸ್ಥೆ, ಉಡುಪಿ, ಜಿಲ್ಲಾ ಘಟಕ , ಜಿಲ್ಲಾಡಳಿತ ಉಡುಪಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ, (ಡಿ.ಡಿ.ಆರ್.ಸಿ.) ಉಡುಪಿ ಜಿಲ್ಲೆ, ಇವರ ಸಂಯುಕ್ತ ಆಶ್ರಯದಲ್ಲಿ ಈಗಾಗಲೇ ಶಿಬಿರಗಳ ಮೂಲಕ ಆಯ್ಕೆ ಮಾಡಲಾಗಿರುವ ಅರ್ಹ ವಿಕಲಚೇತನ ಫಲಾನುಭವಿಗಳಿಗೆ ಉಚಿತವಾಗಿ ಸಾಧನ ಸಲಕರಣೆ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿನ ಸ್ವ ಸಹಾಯ ಸಂಘಗಳಿಗೆ ತ್ಯಾಜ್ಯದಲ್ಲಿನ ವಸ್ತುಗಳನ್ನು ಬಳಕೆ ಮಾಡಿ, ವಿವಿಧ ದಿನನಿತ್ಯದ ಉಪಯೋಗಿ ವಸ್ತುಗಳನ್ನು ತಯಾರಿಸುವ ಕುರಿತು ವೆಲ್ಲೂರು ಶ್ರೀನಿವಾಸ್ ಇವರು ಒಂದು ವಾರದಿಂದ ತರಬೇತಿಯನ್ನು ನೀಡುತ್ತಿದ್ದು, ತ್ಯಾಜ್ಯದಲ್ಲಿರುವ ಮರುಬಳಕೆಗೆ ಉಪಯೋಗಿಸಬಹುದಾದ ವಸ್ತುಗಳನ್ನು ವಿಂಗಡಿಸುವ ಕುರಿತಂತೆ ಜಿಲ್ಲೆಯ ವಿಕಲಚೇತನರಿಗೆ ತರಬೇತಿ ನೀಡಿ, ಉದ್ಯೋಗವಕಾಶ ಒದಗಿಸಲು ಚಿಂತನೆ ನಡೆಸಿದ್ದು, ಈ ಉದ್ಯೋಗ ನಿರ್ವಹಣೆಗೆ ಯಾವುದೇ ವಿದ್ಯಾರ್ಹತೆಯ ಅಗತ್ಯವಿಲ್ಲ, ವಿಕಲಚೇತನರು ಕುಳಿತಲ್ಲೇ ಈ ಕೆಲಸವನ್ನು ಮಾಡಬಹುದು ಹಾಗೂ ಸಂಪಾದನೆಯ ಮೂಲಕ ಆರ್ಥಿಕ ಸ್ವಾವಲಂಬಿಗಳಾಗಬಹುದು, ತ್ಯಾಜ್ಯ ಎಂಬುದು ಪ್ರತಿನಿತ್ಯ ಉತ್ಪಾದನೆಯಾಗುತ್ತಲ್ಲೇ ಇರುವುದರಿಂದ , ವಿಕಲಚೇತನರಿಗೆ ಖಾಯಂ ಉದ್ಯೋಗ ದೊರೆಯಲಿದೆ ಹಾಗೂ ಈ ಉದ್ಯೋಗದಲ್ಲಿ ನಿವೃತ್ತಿ ಎಂಬುದೇ ಇಲ್ಲವಾಗಿದ್ದು, ಆಸಕ್ತ ವಿಲಕಚೇನತರು ಇಂದಿನಿಂದಲೇ ಜಿಲ್ಲಾ ವಿಲಕಚೇತನರ ಅಧಿಕಾರಿ ಹಾಗೂ ರೆಡ್ ಕ್ರಾಸ್ ಸಂಸ್ಥೆಯಲ್ಲಿ ತಮ್ಮ ಹೆಸರು ನೊಂದಾಯಿಸುವಂತೆ ಜಿಲ್ಲಾಧಿಕಾರಿ ಹೇಳಿದರು. ಕಾರ್ಯಕ್ರಮದಲ್ಲಿ ಇ.ಐ.ಎಲ್ ರವರ ಸಿ.ಎಸ್.ಆರ್. ನಿಧಿಯಿಂದ 371 ವಿಕಲಚೇತನರಿಗೆ 40 ಲಕ್ಷ ಮೌಲ್ಯದ ವಿವಿಧ ರೀತಿಯ ಸಾಧನ ಸಲಕರಣೆಗಳನ್ನು ವಿತರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕರ್ನಾಟಕ ರಾಜ್ಯ ಶಾಖೆಯ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ, ಉಡುಪಿ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಡಾ. ಉಮೇಶ್ ಪ್ರಭು, ಇ.ಐ.ಎಲ್ ಕಂಪೆನಿಯ ಡಿಜಿಎಂ ಕೆ. ಸ್ವಾಮಿ ನಾಥನ್, ವಿಜಯ ಶಾಸ್ತ್ರಿ ಉಪಸ್ಥಿತರಿದ್ದರು.