Connect with us

    DAKSHINA KANNADA

    ಅನರ್ಹರಿಗೆ ಮನೆ ಮಂಜೂರಾತಿ:- ಕ್ರಿಮಿನಲ್ ಮೊಕದ್ದಮೆ ಎಚ್ಚರಿಕೆ

    ಮಂಗಳೂರು,ಜುಲೈ 25 : ಕೆಲವು ಅನರ್ಹರು ವಸತಿ ಯೋಜನೆಯಡಿ ವಸತಿ ಮಂಜೂರು ಮಾಡಿಸಿಕೊಂಡಿರುವುದು ಜಿಲ್ಲಾ ಪಂಚಾಯತ್ ಗಮನಕ್ಕೆ ಬಂದಿದೆ. ಅಂತಹ ಅನರ್ಹರನ್ನು ಗುರುತಿಸುವ ಅಭಿಯಾನ ಜಿಲ್ಲಾ ಪಂಚಾಯತಿ ವತಿಯಿಂದ ಕೈಗೆತ್ತಿಕೊಳ್ಳಲಾಗಿದೆ. ಆದ್ದರಿಂದ ಅಂತಹ ಅನರ್ಹ ಫಲಾನುಭವಿಗಳು ತುರ್ತಾಗಿ ಸಂಬಂಧಪಟ್ಟ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ ಮಾಹಿತಿ ನೀಡಬೇಕು. ಹಾಗೂ ಅಕ್ರಮ/ನಿಯಮಬಾಹಿರವಾಗಿ ಪಡೆದ ಅನುದಾನವನ್ನು ಕೂಡಲೇ ಹಿಂತಿರುಗಿಸಬೇಕು. ಇಲ್ಲವಾದಲ್ಲಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಅಂತವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

    ಸರ್ಕಾರದ ವಿವಿಧ ವಸತಿ ಯೋಜನೆಗಳಡಿ ಅರ್ಹ ವಸತಿ ರಹಿತರಿಗೆ ವಸತಿ ಸೌಲಭ್ಯ ನೀಡುವ ಕಾರ್ಯಕ್ರಮ ಗ್ರಾಮ ಪಂಚಾಯಿತಿಗಳಿಂದ ಅನುಷ್ಟಾನಗೊಳಿಸಲಾಗುತ್ತಿದೆ. ಸರಕಾರದ ವಸತಿ ಯೋಜನೆಯಡಿ ಪ್ರತಿಯೊಂದು ಫಲಾನುಭವಿ ಒಮ್ಮೆ ಮಾತ್ರವೇ ಸೌಲಭ್ಯ ಪಡೆಯಬಹುದಾಗಿದೆ. ಒಂದು ವೇಳೆ ಒಂದಕ್ಕಿಂತ ಹೆಚ್ಚು ಬಾರಿ ವಸತಿ ಸೌಲಭ್ಯ ಪಡೆದಿದ್ದರೆ ಅಂತವರನ್ನು ಅನರ್ಹರೆಂದು ಪರಿಗಣಿಸಲಾಗುವುದು. ಅನರ್ಹರನ್ನು ಆಯ್ಕೆ ಮಾಡಿದ ಆರೋಪದಡಿ ಸಂಬಂಧಪಟ್ಟ ಗ್ರಾಮ ಪಂಚಾಯತಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿ/ಕಾರ್ಯದರ್ಶಿಯವರ ವಿರುದ್ಧವೂ ಶಿಸ್ತು ಕ್ರಮ ಜರುಗಿಸಲಾಗುವುದು. ಆದರೆ ಅರ್ಹ ಫಲಾನುಭವಿಗಳು ಯಾವುದೇ ಆತಂಕ ಪಡುವ ಅವಶ್ಯಕತೆ ಇಲ್ಲ. 2005-06 ರಿಂದ ವಸತಿ ಯೋಜನೆಗಳಡಿ ಆಯ್ಕೆಗೊಂಡಿರುವ ಎಲ್ಲಾ ಫಲಾನುಭವಿಗಳು 7 ದಿನಗಳೊಳಗೆ ಸಂಬಂಧಟ್ಟ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ ತಮ್ಮ ಆಧಾರ್ ಕಾರ್ಡ್‍ನ ಮಾಹಿತಿಯನ್ನು ಕಡ್ಡಾಯವಾಗಿ ನೀಡಬೇಕು ಎಂದು  ಕಾರ್ಯನಿರ್ವಹಣಾಧಿಕಾರಿಳು ಹೇಳಿದ್ದಾರೆ. 10 ದಿನಗಳೊಳಗೆ ಮನೆ ನಿರ್ಮಾಣ ಆರಂಭಿಸಲು ಸೂಚನೆ:- ಸರ್ಕಾರದಿಂದ ವಿವಿಧ ವಸತಿ ಯೋಜನೆಗಳಡಿ ವಸತಿ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿ ಫಲಾನುಭವಿಯಾಗಿ ಆಯ್ಕೆಗೊಂಡ ನಂತರ ತುರ್ತಾಗಿ ಮನೆಯ ಕಾಮಗಾರಿ ಪ್ರಾರಂಭಿಸಬೇಕಾಗಿರುವುದು ಫಲಾನುಭವಿಗಳ ಕರ್ತವ್ಯ ಹಾಗೂ ಜವಾಬ್ದಾರಿಯಾಗಿದೆ. ಸರಿಯಾದ ಸಮಯದಲ್ಲಿ ಮನೆಯ ಕಾಮಗಾಗಿ ಪ್ರಾರಂಭಿಸದಿದ್ದಲ್ಲಿ ಸರ್ಕಾರದ ಯೋಜನೆಯ ಅನುಷ್ಠಾನದಲ್ಲಿಯೂ ಸಹ ಹಿನ್ನಡೆಯುಂಟಾಗುತ್ತದೆ.

    ದ.ಕ ಜಿಲ್ಲೆಯಲ್ಲಿ ವಸತಿ ಯೋಜನೆಗಳಡಿ 2015-16ರಿಂದ ಈವರೆಗೆ ಆಯ್ಕೆಗೊಂಡಿರುವ ಫಲಾನುಭವಿಗಳಲ್ಲಿ ಬಂಟ್ವಾಳ ತಾಲೂಕಿನಲ್ಲಿ 1,025, ಬೆಳ್ತಂಗಡಿ ತಾಲೂಕಿನಲ್ಲಿ 1,431, ಮಂಗಳೂರು ತಾಲೂಕಿನಲ್ಲಿ 1,041, ಪುತ್ತೂರು ತಾಲೂಕಿನಲ್ಲಿ 612 ಹಾಗೂ ಸುಳ್ಯ ತಾಲೂಕಿನಲ್ಲಿ 351 ಹೀಗೆ ಒಟ್ಟು 4,460 ಫಲಾನುಭವಿಗಳು ಮನೆಯ ಕಾಮಗಾರಿಯನ್ನು ಈವರೆಗೆ ಪ್ರಾರಂಭ ಮಾಡಿರುವುದಿಲ್ಲ. ಅಂತಹ ಫಲಾನುಭವಿಗಳು ಇನ್ನು 10 ದಿನದೊಳಗೆ ಮನೆಯ ಕಾಮಗಾರಿಯನ್ನು ಪ್ರಾರಂಭಿಸಬೇಕು. ಇಲ್ಲವಾದಲ್ಲಿ ಅಂತವರಿಗೆ ಮನೆಯ ಅವಶ್ಯಕತೆ ಇಲ್ಲವೆಂದು ರದ್ದುಪಡಿಸಲಾಗುವುದು.

    ರದ್ದುಪಡಿಸಲಾದ ಫಲಾನುಭವಿಗಳಿಗೆ ಮುಂದಿನ ಯಾವುದೇ ವಸತಿ ಯೋಜನೆಯಡಿ ಇನ್ನೊಮ್ಮೆ ಆಯ್ಕೆಗೆ ಅವಕಾಶ ನೀಡಲಾಗುವುದಿಲ್ಲ ಹಾಗೂ ರದ್ದುಪಡಿಸಲಾದ ಮನೆಗಳಿಗೆ ಬದಲಾಗಿ ಇತರೆ ಅರ್ಹ ವಸತಿ ರಹಿತರನ್ನು ಆಯ್ಕೆಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು  ತಿಳಿಸಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *