ಕಣ್ಣೂರು ಸೆಪ್ಟೆಂಬರ್ 18: ಚೂಯಿಂಗ್ ಗಮ್ ಗಂಟಲಲ್ಲಿ ಸಿಲುಕಿ ಉಸಿರಾಡಲು ಕಷ್ಟಪಡುತ್ತಿದ್ದ ಬಾಲಕಿಯನ್ನು ರಸ್ತೆಯಲ್ಲಿದ್ದ ಯುವಕರ ತಂಡ ರಕ್ಷಣೆ ಮಾಡಿದೆ.

ಕೇರಳದ ಪಝಾಯಂಗಡಿಯಲ್ಲಿ ಬಾಲಕಿಯೊಬ್ಬಳು ಚೂಯಿಂಗ್ ಗಮ್ ತಿನ್ನುತ್ತಾ ಸೈಕಲ್ ನಲ್ಲಿ ತಿರುಗಾಡುತ್ತಿದ್ದಳು. ಈ ವೇಳೆ ಏಕಾಏಕಿ ಚೂಯಿಂಗ್ ಗಮ್ ಬಾಲಕಿಯ ಗಂಟಲಲ್ಲಿ ಸಿಕ್ಕಿಹಾಕಿಕೊಂಡಿದೆ. ಚೂಯಿಂಗ್ ಗಮ್ ಗಂಟಲಲ್ಲಿ ಸಿಕ್ಕಿಹಾಕಿಕೊಂಡ ಪರಿಣಾಮ ಸರಿಯಾಗ ಉಸಿರಾಡಲು ಸಾಧ್ಯವಾಗದೇ ಸಂಕಷ್ಟದಲ್ಲಿದ್ದ ಬಾಲಕಿಗೆ ಅಲ್ಲೆ ರಸ್ತೆಯಲ್ಲಿ ನಿಂತಿದ್ದ ಯುವಕರ ತಂಡ ಸಕಾಲದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ರಕ್ಷಣೆ ಮಾಡಿದೆ.
ಉಸಿರಾಡಲು ಕಷ್ಟಪಡುತ್ತಿದ್ದ ಬಾಲಕಿ ಅಲ್ಲೆ ಇದ್ದ ಯುವಕರಲ್ಲಿ ಸಹಾಯ ಕೇಳಿದ್ದಾಳೆ. ಇದರಿಂದಾಗಿ ಬಾಲಕಿ ಜೀವ ಉಳಿಸಲು ಸಾಧ್ಯವಾಗಿದೆ ಎಂದು ಯುವಕರು ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ರೀತಿಯ ಪ್ರಥಮ ಚಿಕಿತ್ಸಾ ವಿಧಾನಗಳ ವಿಡಿಯೋಗಳನ್ನು ನೋಡಿದ್ದರಿಂದ ಬಾಲಕಿಗೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಯಿತು ಎಂದು ಯುವಕರು ತಿಳಿಸಿದ್ದಾರೆ.



