ಬೆಳ್ತಂಗಡಿ, ಮಾರ್ಚ್ 21: ಕರಂಬಾರು ಗ್ರಾಮದ ಕೇಳ್ಕರ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪವಿರುವ ನದಿಯಲ್ಲಿ ಈಜಲು ತೆರಳಿದ್ದ ಯುವಕನೊಬ್ಬ ಅಕಸ್ಮಿಕವಾಗಿ ನೀರಿನ ಸೆಳೆತಕ್ಕೆ ಸಿಲುಕಿ ಸಾವನ್ನಪ್ಪಿರುವ ಘಟನೆ ಇಂದು ಸಂಭವಿಸಿದೆ.

ಮೃತ ಯುವಕನನ್ನು ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಸುಣ್ಣತ್ ಕೆರೆ ನಿವಾಸಿ ಇರ್ಫಾನ್ (19) ಎಂದು ಗುರುತಿಸಲಾಗಿದೆ. ಇಂದು ಸಂಜೆ ಸುಮಾರು 4 ಗಂಟೆಯ ವೇಳೆಗೆ ಇರ್ಫಾನ್ ನದಿಯಲ್ಲಿ ಈಜಲು ತೆರಳಿದ್ದನು. ಈ ಸಂದರ್ಭದಲ್ಲಿ ನದಿಯ ನೀರಿನ ತೀವ್ರ ಸೆಳೆತಕ್ಕೆ ಸಿಲುಕಿದ ಆತ ಅಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದಾನೆ. ಇರ್ಫಾನ್ ನೀರಿನಲ್ಲಿ ಮುಳುಗುತ್ತಿರುವುದನ್ನು ಗಮನಿಸಿದ ತಕ್ಷಣವೇ ಸ್ಥಳೀಯ ಯುವಕರು ರಕ್ಷಣೆಗೆ ಧಾವಿಸಿದ್ದಾರೆ. ತೀವ್ರ ಪ್ರಯತ್ನದ ನಂತರ ಆತನನ್ನು ನೀರಿನಿಂದ ಹೊರತೆಗೆದು, ಕೂಡಲೇ ಚಿಕಿತ್ಸೆಗಾಗಿ ಉಜಿರೆಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ದುರದೃಷ್ಟವಶಾತ್ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಇರ್ಫಾನ್ ಕೊನೆಯುಸಿರೆಳೆದಿದ್ದಾನೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.