Connect with us

LATEST NEWS

ಖ್ಯಾತ ಯಕ್ಷಗಾನ ಕಲಾವಿದ ಶ್ರೀಪಾದ ಹೆಗಡೆ ಹಡಿನಬಾಳ ಇನ್ನಿಲ್ಲ

ಉಡುಪಿ : ಹೊನ್ನಾವರ ತಾಲ್ಲೂಕಿನ ಹಡಿನಬಾಳದ ಪ್ರಸಿದ್ಧ ಯಕ್ಷಗಾನ ಕಲಾವಿದ ಶ್ರೀಪಾದ ಹೆಗಡೆ ಗುರುವಾರ ಉಡುಪಿಯಲ್ಲಿ ನಿಧನರಾದರು. ಅವರಿಗೆ 67 ವರ್ಷ ವಯಸ್ಸಾಗಿತ್ತು.


ಕೆಲವು ತಿಂಗಳ ಹಿಂದೆ ಅಪಘಾತದಲ್ಲಿ ಗಾಯಗೊಂಡಿದ್ದ ಶ್ರೀಪಾದ ಹೆಗಡೆ ಅವರು ಕೆಲವು ದಿನಗಳ ಹಿಂದೆ ಚೇತರಿಸಿಕೊಂಡಿದ್ದರು. ಆದರೆ, ಪುನಃ ಅನಾರೋಗ್ಯ ಕಾಣಿಸಿಕೊಂಡ ಕಾರಣ ಉಡುಪಿಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಯಕ್ಷಗಾನದಲ್ಲಿ ಅವರು ‘ಗದಾಯುದ್ಧ’ ಪ್ರಸಂಗದ ಭೀಮನ ಪಾತ್ರ, ಶನಿಯ ಪಾತ್ರ ಸೇರಿದಂತೆ ವಿವಿಧ ಪ್ರಮುಖ ಪಾತ್ರಗಳಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಹೊನ್ನಾವರ ತಾಲ್ಲೂಕಿನ ಗುಂಡಬಾಳ ಯಕ್ಷಗಾನ ಮೇಳದಲ್ಲಿ ತಮ್ಮ ಕಲಾ ಜೀವನವನ್ನು ಆರಂಭಿಸಿದ ಅವರು, ಬಡಗುತಿಟ್ಟಿನ ವಿವಿಧ ಮೇಳಗಳಲ್ಲಿ ಕಲಾ ಸೇವೆ ಮಾಡಿದ್ದರು. ಅಭಿನಯದ ಜೊತೆಗೇ ಮಣ್ಣಿನಿಂದ ಸುಂದರವಾದ ಗಣಪತಿ ವಿಗ್ರಹಗಳನ್ನು ತಯಾರಿಸುವುದರಲ್ಲೂ ಅವರು ಚಿರಪರಿಚಿತರಾಗಿದ್ದರು. ಕಡುಬಡತನದ ಕುಟುಂಬದಿಂದ ಬಂದಿದ್ದ ಅವರು, ತಮ್ಮ ಜೀವನದುದ್ದಕ್ಕೂ ಕಲಾಸೇವೆಯಲ್ಲೇ ತೊಡಗಿಕೊಂಡಿದ್ದರು.