DAKSHINA KANNADA
ಯಕ್ಷಗಾನದ ಮೇರು ಕಲಾವಿದ ಪಾತಾಳ ವೆಂಕಟರಮಣ ಭಟ್ ನಿಧನ

ಉಪ್ಪಿನಂಗಡಿ ಜುಲೈ 19: ಹಿರಿಯ ಯಕ್ಷಗಾನ ಕಲಾವಿದ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಾತಾಳ ವೆಂಕಟರಮಣ ಭಟ್ (92) ಶನಿವಾರ ಹೃದಯಾಘಾತದಿಂದ ಸ್ವಗೃಹ ಉಪ್ಪಿನಂಗಡಿಯಲ್ಲಿ ನಿಧನರಾದರು.
ತೆಂಕು ಹಾಗೂ ಬಡಗು ತಿಟ್ಟುಗಳಲ್ಲಿ ವೇಷ ಮಾಡಿ ಲಕ್ಷಾಂತರ ಯಕ್ಷಾಭಿಮಾನಿಗಳ ಮನ ಗೆದ್ದಿದ್ದರು.
16 ನವೆಂಬರ್ 1933ರಲ್ಲಿ ಪುತ್ತೂರು ಸಮೀಪದ ಬೈಪದವು ಎಂಬಲ್ಲಿ ಜನಿಸಿದ ಅವರು, ಚಿಕ್ಕಂದಿನಲ್ಲೇ ಯಕ್ಷಗಾನ ಆಸಕ್ತಿ ಬೆಳೆಸಿಕೊಂಡವರು. ಪುತ್ತೂರು ಕೃಷ್ಣ ಭಟ್ಟರಿಂದ ತೆಂಕುತಿಟ್ಟಿನ ಯಕ್ಷಗಾನ ವಿದ್ಯೆ ಕಲಿತು, ಸೌಕೂರು ಮೇಳ, 1954ರಲ್ಲಿ ಮೂಲ್ಕಿ ಮೇಳ, 1963ರಲ್ಲಿ ಧರ್ಮಸ್ಥಳ ಮೇಳಕ್ಕೆ ಸೇರಿದರು. ಧರ್ಮಸ್ಥಳ ಮೇಳದ ತಿರುಗಾಟವು ಪಾತಾಳ ವೆಂಕಟ್ರಮಣ ಭಟ್ಟರ ಕಲಾ ಜೀವನದ ಸುವರ್ಣ ಯುಗ. ರಂಭೆ, ಊರ್ವಶಿ, ಮೇನಕೆ, ಸತ್ಯಭಾಮೆ, ದೌಪದಿ, ಮೀನಾಕ್ಷಿ ಮೊದಲಾದ ಪಾತ್ರಗಳಿಗೆ ಜೀವ ತುಂಬಿದವರು ವೆಂಕಟರಮಣ ಭಟ್ಟರು.

ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತು ಪ್ರಶಸ್ತಿ, ಯಕ್ಷಗಾನ ಕಲಾರಂಗ ಪ್ರಶಸ್ತಿ, ವಿಟ್ಲ ಗೋಪಾಲಕೃಷ್ಣ ಭಟ್ ಪ್ರತಿಷ್ಟಾನ ಪ್ರಶಸ್ತಿ, ವಿದ್ಯಾಮಾನ್ಯ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ದೊರೆತಿದೆ.