ಯಾದಗಿರಿ ಎಪ್ರಿಲ್ 17: ಸುರಪುರ ತಾಲ್ಲೂಕಿನ ಶಾಂತಪುರ ಕ್ರಾಸ್ ಬಳಿ ಶುಕ್ರವಾರ ಖಾಸಗಿ ಬಸ್ ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತರ ಸಂಖ್ಯೆ ಒಂಬತ್ತಕ್ಕೆ ಏರಿಕೆಯಾಗಿದೆ. ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣ ಪಂಚಾಯಿತಿ ಸದಸ್ಯ ಕೃಷ್ಣ ನಾಯಕ್ (52) ಸೇರಿದಂತೆ ಅವರ ಕುಟುಂಬದ ಎಂಟು ಮಂದಿ ಈ ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

ವೇಣುಗೋಪಾಲ ಸ್ವಾಮಿಯ ದರ್ಶನ ಮುಗಿಸಿ ಸಿರವಾರಕ್ಕೆ ಮರಳುತ್ತಿದ್ದ ವೇಳೆ, ವಾಹನವೊಂದನ್ನು ಓವರ್ಟೇಕ್ ಮಾಡುವ ಭರದಲ್ಲಿ ಎದುರಿನಿಂದ ಬಂದ ಬಸ್ಗೆ ಕಾರು ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಬಸ್ ಮತ್ತು ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೃಷ್ಣ ನಾಯಕ್ ಮತ್ತು ಶರಣಪ್ಪ ಸೇರಿದಂತೆ ಮೂವರು ಸಜೀವ ದಹನವಾಗಿದ್ದಾರೆ.

ರಾಯಚೂರು ಜಿಲ್ಲೆಯ ಸಿರವಾರದ ಕೃಷ್ಣ ನಾಯಕ್ (52), ಅನಂತಾ ಕಲಾ ಕೃಷ್ಣ (45), ಶರಣಪ್ಪ (36), ನಿಸರ್ಗಾ ಶರಣಪ್ಪ (30), ಸಿದ್ಧಾರ್ಥ ಶರಣಪ್ಪ (5), ಶಶಿಕಲಾ (30), ಅದ್ವಿಕ್ (5), ಚಂದನಾ (8) ಮತ್ತು ಒಂದೂವರೆ ವರ್ಷದ ಶ್ರೀನಿಧಿ ಮೃತಪಟ್ಟಿದ್ದಾರೆ. ಅವಘಡದಲ್ಲಿ ಶಶಿಕಲಾ ಪುತ್ರ ವಿರಾಟ್ ಒಬ್ಬನೇ ಬದುಕು ಉಳಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಅದೃಷ್ಟವಶಾತ್ ಬಸ್ಸಿನಲ್ಲಿದ್ದ 20 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕುಟುಂಬದ ಸದಸ್ಯರನ್ನೆಲ್ಲಾ ಕಳೆದುಕೊಂಡ ಪುಟ್ಟ ಬಾಲಕ ವಿರಾಟ್ ಒಬ್ಬನೇ ಬದುಕುಳಿದಿದ್ದಾನೆ. ಘಟನಾ ಸ್ಥಳಕ್ಕೆ ಎಸ್ಪಿ ಪೃಥ್ವಿಕ್ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.