ಕಡಬ, ಮಾರ್ಚ್ 12: ತೋಟಕ್ಕೆ ಮೇಯಲು ಬಂದ ಜಾನುವಾರುಗಳನ್ನು ಓಡಿಸಲು ಹೋದ ವೇಳೆ ಮಹಿಳೆಯೊಬ್ಬರು ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದಾರೆ. ಮೃತಪಟ್ಟವರು ಕೊಣಾಲು ಗ್ರಾಮದ ಪಾತೃಮಾಡಿ ನಿವಾಸಿ 64 ವರ್ಷದ ಲೀಲಾವತಿ ಶೆಟ್ಟಿ ಎಂದು ಗುರುತಿಸಲಾಗಿದೆ.

ಮಾಹಿತಿಯ ಪ್ರಕಾರ, ಮಾರ್ಚ್ 11ರಂದು ಸಂಜೆ ತಮ್ಮ ತೋಟಕ್ಕೆ ಬಂದ ಜಾನುವಾರುಗಳನ್ನು ಓಡಿಸಲು ಲೀಲಾವತಿ ಶೆಟ್ಟಿ ಹೊರಟಿದ್ದರು. ಈ ವೇಳೆ ಅವರು ಆಕಸ್ಮಿಕವಾಗಿ ನೆಲಕ್ಕೆ ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಲೀಲಾವತಿ ಅವರ ಪುತ್ರ ಹರೀಶ್ ಲಾರಿ ಚಾಲಕರಾಗಿದ್ದು, ಆ ದಿನ ರಾತ್ರಿ ಮನೆಗೆ ಬಂದಾಗ ಮನೆ ಬಾಗಿಲು ತೆರೆದಿರುವುದು ಕಂಡುಬಂದಿದೆ. ಆದರೆ ತಾಯಿ ಮನೆಯಲ್ಲಿ ಕಾಣಿಸದ ಹಿನ್ನೆಲೆಯಲ್ಲಿ ಆತಂಕಗೊಂಡ ಅವರು ನೆರೆಮನೆಯವರ ಸಹಾಯದಿಂದ ಹುಡುಕಾಟ ಆರಂಭಿಸಿದ್ದಾರೆ.
ನಂತರ ತಮ್ಮ ತೋಟದಲ್ಲಿ ಲೀಲಾವತಿ ಶೆಟ್ಟಿ ಅವರು ಬಿದ್ದ ಸ್ಥಿತಿಯಲ್ಲಿ ಮೃತಪಟ್ಟಿರುವುದು ಪತ್ತೆಯಾಗಿದೆ. ಮೃತರ ಒಂದು ಕೈಯಲ್ಲಿ ಕಲ್ಲು ಹಾಗೂ ಇನ್ನೊಂದು ಕೈಯಲ್ಲಿ ದೊಣ್ಣೆ ಇದ್ದು, ಜಾನುವಾರುಗಳನ್ನು ಓಡಿಸುವ ವೇಳೆ ಆಕಸ್ಮಿಕವಾಗಿ ಬಿದ್ದಾಗ ಕೈಯಲ್ಲಿದ್ದ ಕಲ್ಲು ಹಣೆಗೆ ತಾಗಿ ಗಂಭೀರ ಗಾಯಗೊಂಡಿರಬಹುದು ಎಂದು ಅಂದಾಜಿಸಲಾಗಿದೆ.