ಚಿಕ್ಕಬಳ್ಳಾಪುರ,ಫೆಬ್ರವರಿ 26 : ಈಜುಕೊಳದಲ್ಲಿ ಮುಳುಗಿ ಮಹಿಳೆಯೊಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಚಿಂತಡಪಿ ಗ್ರಾಮದ ಬಳಿ ಫೆಬ್ರವರಿ. 25 ರಂದು ನಡೆದಿದೆ.

ಮೃತರನ್ನು ಕುಂದಲಗುರ್ಕಿ ಗ್ರಾಮದ ರೇಖಾ (37) ಎಂದು ಗುರುತಿಸಲಾಗಿದೆ. ಮೃತ ರೇಖಾ ಎನ್ಜಿಓ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು ಆ ಸಂಸ್ಥೆಯ ವತಿಯಿಂದಲೇ ಚಿಂತಡಪಿ ಗ್ರಾಮದ ರೆಸಾರ್ಟ್ ಕಂ ಹೋಟೆಲ್ನಲ್ಲಿ 2 ದಿನಗಳ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಾಗಾರದಲ್ಲಿ ಭಾಗಿಯಾಗಿದ್ದ ರೇಖಾ ಅವರು ಸಂಜೆ 6 ಗಂಟೆಯ ನಂತರ ಈಜುಕೊಳದಲ್ಲಿ ಈಜಾಡುವ ಸಲುವಾಗಿ ಧುಮುಕಿದ್ದಾರೆ. ಆದರೆ ದುರಾದೃಷ್ಟವಶಾತ್ ಈಜು ಬರುತ್ತಿದ್ದರೂ ಆಕೆ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಕೆಲಕಾಲ ನೀರಿನಲ್ಲಿ ಧುಮುಕಿರುವ ರೇಖಾ ಅವರು ಈಜಾಡುತ್ತಿದ್ದಾಳೆ ಅಂತಲೇ ಸಹೋದ್ಯೋಗಿಗಳು ಭಾವಿಸಿದ್ದಾರೆ. ಬಳಿಕ ಅನುಮಾನಗೊಂಡು ನೀರಿನಿಂದ ಮೇಲೆ ಎತ್ತಿಕೊಂಡು ಬಂದಿದ್ದಾರೆ. ಕೂಡಲೇ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದು, ಅಷ್ಟರಲ್ಲೇ ಮಹಿಳೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಈ ಘಟನೆ ದೃಶ್ಯ ರೆಸಾರ್ಟ್ನ ಸಿಸಿಟಿವಿಯಲ್ಲಿ ದಾಖಲಾಗಿದೆ. ಈ ಬಗ್ಗೆ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.