ಬೆಳಗಾವಿ, ಮಾರ್ಚ್ 16: ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಆಸ್ತಿಗಾಗಿ ಮಹಿಳೆಯೊಬ್ಬಳನ್ನು ಆಕೆಯ ಸ್ನೇಹಿತನೇ ಕೊಲೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.

ಸುಜಾತಾ ಪವಾರ್ (34) ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ. ಕುಮಾರ್ ಹವಾಲ್ದಾರ್ ಎಂಬಾತನೇ ಕೊಲೆಗೈದ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಟ್ಟಣದ ಪಾರೆಶೇಟ್ಟಿ ಗಲ್ಲಿಯ ನಿವಾಸಿಯಾಗಿರುವ ಸುಜಾತಾ ಗಂಡನೊಂದಿಗೆ ಹೊಂದಾಣಿಕೆಯಾಗದ ಕಾರಣ ತವರು ಮನೆಯಲ್ಲಿ ವಾಸವಾಗಿದ್ದರು. ಆರೋಪಿ ಕುಮಾರ ಕಲ್ಲಪ್ಪಾ ಹವಾಲ್ದಾರನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು ಈತ ಆಸ್ತಿಯನ್ನು ತನ್ನ ಹೆಸರಿಗೆ ಮಾಡು ಎಂದು ಮಹಿಳೆಯನ್ನು ಪೀಡಿಸುತ್ತಿದ್ದ ಎಂದು ಹೇಳಲಾಗಿದೆ. ಇದಕ್ಕೆ ನಿರಾಕರಣೆ ಮಾಡಿದ್ದರಿಂದ ಪಟ್ಟಣದ ಹೊರವಲಯದಲ್ಲಿ ಇರುವ ತೋಟದಲ್ಲಿ ಕುತ್ತಿಗೆಗೆ ಬಿಗಿದು ಉಸಿರು ಗಟ್ಟಿಸಿ ಕೊಲೆಗೈದಿದ್ದಾನೆ ಎಂದು ಆರೋಪಿಸಿ ತಾಯಿ ಲೀಲಾವತಿ ಹೂಗಾರ ಅವರು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮಾರ್ಚ್ 5ರಂದು ಮಧ್ಯಾಹ್ನ ಆರೋಪಿ ಕುಮಾರ್ ಸುಜಾತಾಳನ್ನು ಬೈಕ್ನಲ್ಲಿ ಕರೆದೊಯ್ದು ಕಬ್ಬಿನ ತೋಟಕ್ಕೆ ಕರೆದುಕೊಂಡು ಹೋಗಿ, ಬಟ್ಟೆಯಿಂದ ಕುತ್ತಿಗೆ ಬಿಗಿದು ಉಸಿರು ಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.