Connect with us

LATEST NEWS

ಪ್ರಿಯಕರನನ್ನೇ ಪತಿ ಮಾಡಲು ಪತ್ನಿ ಎರಚಿದಳು ಅಸಿಡ್.. !

ಪ್ರಿಯಕರನನ್ನೇ ಪತಿ ಮಾಡಲು ಪತ್ನಿ ಎರಚಿದಳು ಅಸಿಡ್.. !

ಹೈದರಾಬಾದ್‌, ಡಿಸೆಂಬರ್ 13 : ಇದು ಸಿನೆಮಾ ಅಲ್ಲ.ಇದು ವಾಸ್ತವ. ಕಾಲ್ಪನಿಕ ಸಿನೆಮಾಗಳನ್ನೂ ಮೀರಿಸುವಂಥ ಇಂತಹ ಅಪರಾಧ ಕೃತ್ಯ ನಡೆದಿರುವುದು ನೆರೆಯ ಹೈದರಾಬಾದ್‌ನಲ್ಲಿ. ಪತಿಯನ್ನು ಕೊಂದ ಮಹಿಳೆ ಈಗ ಪೊಲೀಸರ ಅತಿಥಿಯಾಗಿದ್ದಾಳೆ.

ಪತಿ ಸುಧಾಕರ ಜೊತೆ ಸ್ವಾತಿ

 ಏನಿದು ಸ್ಟೋರಿ ? :

ಕೆಲವು ವರ್ಷಗಳ ಹಿಂದೆ ಸುಧಾಕರ ರೆಡ್ಡಿ ಜತೆ ಸ್ವಾತಿ ಮದುವೆ ನಡೆದಿತ್ತು.

ಆ ಬಳಿಕ ರಾಜೇಶ್‌ ಎಂಬಾತನ ಜತೆ ಆಕೆಗೆ ಪ್ರೇಮ ಅಂಕುರಿಸಿದೆ. ಹೀಗಾಗಿ ಪ್ರಿಯಕರ ರಾಜೇಶ್‌ ಜತೆ ಸೇರಿ ಪತಿಯ ಕೊಲೆ ಮಾಡಲು ಸ್ವಾತಿ ಪ್ಲಾನ್ ಮಾಡಿದಳು.

ನವೆಂಬರ್ 26ರಂದು ನಾಗರಕರ್ನೂಲ್‌ ಜಿಲ್ಲೆಯಲ್ಲಿರುವ ತನ್ನ ಮನೆಯಲ್ಲಿ ಪತಿ ಸುಧಾಕರ್‌ ಮಲಗಿದ್ದ ಸಮಯ ಆತನ ತಲೆಗೆ ಹೊಡೆದು ಕೊಂದು ಹಾಕಿದ್ದಳು.

ಬಳಿಕ ಸ್ವಾತಿ ಮತ್ತು ರಾಜೇಶ್‌ ಇಬ್ಬರೂ ಸೇರಿ ಮೃತದೇಹವನ್ನು ಸಮೀಪದ ಅರಣ್ಯಪ್ರದೇಶದಲ್ಲಿ ಎಸೆದು ಬಂದಿದ್ದರು.

ಪ್ರಿಯಕರನಿಗೆ ಆ್ಯಸಿಡ್‌ ಎರಚಿದ ಸ್ವಾತಿ:

ಎರಡು ದಿನಗಳ ಅನಂತರ ಪ್ರಿಯಕರ ರಾಜೇಶ್‌ನ ಮುಖಕ್ಕೆ ಸ್ವಾತಿ ಆ್ಯಸಿಡ್‌ ಎರಚಿದ್ದಾಳೆ.!

ಈ ಸಂದರ್ಭದಲ್ಲಿ ರಾಜೇಶ್‌ ಮುಖ ಸುಟ್ಟುಹೋಯಿತು.ಗಂಡ ಸುಧಾಕರನ ಸ್ಥಾನವನ್ನು ತುಂಬಲೆಂದೇ ಇಬ್ಬರೂ ಸೇರಿಯೇ ಈ ಖತರ್ನಾಕ್‌ ಪ್ಲಾನ್‌ ರೂಪಿಸಿದ್ದರು.

ಆ ಪ್ಲಾನ್ ಪ್ರಕಾರ ಸುಟ್ಟ ಗಾಯಗಳಾದ ರಾಜೇಶ್‌ನನ್ನು ಮನೆಗೆ ಕರೆದೊಯ್ದ ಸ್ವಾತಿ, “ಪತಿಯ ಮುಖಕ್ಕೆ ಯಾರೋ ದುಷ್ಕರ್ಮಿಗಳು ಆ್ಯಸಿಡ್‌ ಎರಚಿದ್ದಾರೆ’ ಎಂದು ಅತ್ತೆ-ಮಾವನಿಗೆ ಹೇಳಿದ್ದಳು. ಸೊಸೆಯ ಮಾತನ್ನು ಅತ್ತೆ ಮಾವ ನಂಬಿದರು.

ರಾಜೇಶನ ಪ್ಲಾಸ್ಟಿಕ್‌ ಸರ್ಜರಿಗೆ ಖರ್ಚಾಯಿತು ಬರೋಬ್ಬರಿ 5 ಲಕ್ಷ ರೂಪಾಯಿ:

ಅಪ್ಪ-ಅಮ್ಮ, ರಾಜೇಶ್‌ನನ್ನು ಸುಧಾಕರನೆಂದೇ ನಂಬಿ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಅಷ್ಟೇ ಅಲ್ಲದೇ, ಅವನ ಚಿಕಿತ್ಸೆ- ಪ್ಲಾಸ್ಟಿಕ್‌ ಸರ್ಜರಿಗಾಗಿ ಬರೋಬ್ಬರಿ 5 ಲಕ್ಷ ರೂ.ಗಳನ್ನೂ ವ್ಯಯಿಸಿದ್ದಾರೆ.

ಪ್ಲಾಸ್ಟಿಕ್‌ ಸರ್ಜರಿ ಮುಗಿದರೆ, ಮತ್ತೆ ನಮ್ಮ ಮೇಲೆ ಯಾರೂ ಅನುಮಾನ ಪಡುವುದಿಲ್ಲ ಎಂದೇ ಭಾವಿಸಿದ್ದರು ಸ್ವಾತಿ ಮತ್ತು ರಾಜೇಶ್‌.

ಆದರೆ ಹೆತ್ತ ಕರುಳು ಅಮ್ಮನಿಗೆ ಇದು ಗೊತ್ತಾಗದೇ ಇರುತ್ತಾ ? ಹೌದು ಪ್ಲಾಸ್ಟಿಕ್‌ ಸರ್ಜರಿ ಯಾಗಿ ಆಸ್ಪತ್ರೆಯಲ್ಲಿದ್ದ “ಮಗ’ನ ಮಾತು, ಆತನ ನಡವಳಿಕೆ, ವರ್ತನೆ ಬಗ್ಗೆ ಅಮ್ಮನಿಗೆ ಅನುಮಾನ ಮೂಡ ತೊಡಗಿತು.

ಕುಟುಂಬದ ತೀರಾ ಹತ್ತಿರದ ವಿಚಾರಗಳ ಬಗ್ಗೆ ಹೇಳಿದರೂ ಅವನಿಗೆ ಉತ್ತರಿಸಲು ಸಾಧ್ಯವಾಗುತ್ತಿರಲಿಲ್ಲ.

ಪ್ರಶ್ನೆ ಕೇಳಿದರೆ ಮೆಲ್ಲಗೆ ಹಾರಿಕೆಯ ಉತ್ತರ ನೀಡುತ್ತಿದ್ದ. ಇದನ್ನೆಲ್ಲ ನೋಡಿದ ಹೆತ್ತಮ್ಮನಿಗೆ, “ಇಲ್ಲೇನೋ ನಡೆಯುತ್ತಿದೆ’ ಎಂಬ ಅನುಮಾನ ಬಲವಾಗತೊಡಗಿತು.

ಕೊನೆಗೆ ಸುಧಾಕರನ ಅಪ್ಪ- ಅಮ್ಮ ಪೊಲೀಸ್‌ ಠಾಣೆಯ ಮೆಟ್ಟಿಲು ಏರಿಯೇ ಬಿಟ್ಟರು.

ಸ್ವಾತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಸಂಪೂರ್ಣ ಸಂಚಿನ ಮಾಹಿತಿ ಹೊರಬಿತ್ತು. ಇನ್ನೊಂದೆಡೆ, ಅರಣ್ಯದಲ್ಲಿ ಸುಧಾಕರ ರೆಡ್ಡಿಯ ಮೃತದೇಹವೂ ಪತ್ತೆಯಾಯಿತು.

ರಾಜೇಶ್‌ ಸುಟ್ಟ ಗಾಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಕಾಯುತ್ತಿದ್ದಾರೆ.

ಸತ್ಯ ಬಯಲು ಮಾಡಿತು ಆಧಾರ್ ಕಾರ್ಡ್:

ಹತ್ಯೆಯಾದ ಪತಿಯ ತಂದೆ- ತಾಯಿ ಅನುಮಾನದ ಮೇಲೆ ತನಿಖೆ ಆರಂಭಿಸಿದ್ದ ಪೊಲೀಸರಿಗೆ “ಇವನು ಅವನಲ್ಲ’ವೆಂದು ಹೇಗೆ ಸಾಬೀತು ಮಾಡುವುದು ಎಂಬ ಬಗ್ಗೆ ತಲೆಬಿಸಿಯಾಗಿತ್ತು.

ಅಗಲೇ ಅವರಿಗೆ ಹೊಳೆದದ್ದು ಅಧಾರ್ ಕಾರ್ಡ್. ಆಧಾರ್‌ನ ಬಯೋಮೆಟ್ರಿಕ್‌ ದಾಖಲೆ ತೆಗೆದು ಪರಿಶೀಲನೆ ನಡೆಸಿದಾಗ ಬೆರಳಚ್ಚು ಹೋಲಿಕೆಯಾಗಿಲ್ಲ. ಆಗ ಈ ಖತರ್ನಾಕ್ ಅಸಾಮಿ ಸಿಕ್ಕಿಬಿದ್ದಿದ್ದಾನೆ. ಈಗ ಪ್ರಿಯಕರನೊಂದಿಗೆ ಖತರ್ನಾಕ್ ಸ್ವಾತಿ ಕೂಡ ಜೈಲುಪಾಲಾಗಿದ್ದಾಳೆ.

Facebook Comments

comments