ಚಿಕ್ಕಬಳ್ಳಾಪುರ ಜೂನ್ 29: ಪ್ರಸಿದ್ಧ ಪ್ರವಾಸಿ ತಾಣ ನಂದಿಬೆಟ್ಟದ ಸಮೀಪವಿರುವ ಮುದ್ದೇನಹಳ್ಳಿ ಬಳಿಯ ಹೋಮ್ಸ್ಟೇ ಒಂದರಲ್ಲಿ ಬೆಂಗಳೂರು ಮೂಲದ ಯುವತಿಯೊಬ್ಬಳ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪ್ರೇಯಸಿಯನ್ನು ಕೊಲೆ ಮಾಡಿದ ಬಳಿಕ ಕೇರಳ ಮೂಲದ ಪ್ರಿಯಕರ ಆತ್ಮಹತ್ಯೆಗೆ ಯತ್ನಿಸಿರುವ ಶಂಕೆ ವ್ಯಕ್ತವಾಗಿದ್ದು, ಈ ಘಟನೆಗೆ ‘ಲವ್ ಜಿಹಾದ್’ ಎಂದು ಮೃತಳ ತಾಯಿ ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರು ಮೂಲದ ಸಾಯಿ ಸುರಭಿ (ಮೃತ ಯುವತಿ) ಹಾಗೂ ಕೇರಳದ ಕೋಝಿಕ್ಕೋಡ್ ನಿವಾಸಿಯಾದ ಕ್ಯಾಬ್ ಚಾಲಕ ಸಂಜಿತ್ ಅಲಿ ಕಳೆದ ಶನಿವಾರ ಮುದ್ದೇನಹಳ್ಳಿ ಬಳಿಯ ಹೋಮ್ಸ್ಟೇಗೆ ಬಂದು ರೂಮ್ ಪಡೆದುಕೊಂಡಿದ್ದರು. ಸೋಮವಾರ ಚೆಕ್-ಔಟ್ ಸಮಯ ಮುಗಿದರೂ ರೂಮ್ನ ಬಾಗಿಲು ತೆರೆಯದಿದ್ದಾಗ ಅನುಮಾನಗೊಂಡ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಾಗಿಲು ಮುರಿದು ಒಳಹೋದಾಗ ಸುರಭಿ ಶವವಾಗಿ ಪತ್ತೆಯಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಸಂಜಿತ್ ಅಲಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಕುಶಾಲ್ ಚೌಕ್ಸಿ ಹಾಗೂ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯುವತಿಯ ಶವ ನೇಣು ಬೀಗಿದ ಸ್ಥಿತಿಯಲ್ಲಿದ್ದರೂ, ರೂಮ್ನಲ್ಲಿ ಕೆಲವು ಮಾತ್ರೆಗಳು ಪತ್ತೆಯಾಗಿರುವುದರಿಂದ ವಿಷ ಸೇವಿಸಿರುವ ಸಾಧ್ಯತೆಗಳ ಬಗ್ಗೆಯೂ ಎಫ್ಎಸ್ಎಲ್ (FSL) ತನಿಖೆ ನಡೆಸಲಾಗುತ್ತಿದೆ. ಇದೇ ವೇಳೆ ರೂಮ್ನಲ್ಲಿ ಒಂದು ರಹಸ್ಯ ಡೈರಿ ಪತ್ತೆಯಾಗಿದ್ದು, ಅದರಲ್ಲಿ ಇವರಿಬ್ಬರ ಸಂಬಂಧ ಹಾಗೂ ಸಾವಿಗೆ ಕಾರಣವಾಗಬಹುದಾದ ಹಲವು ಆಘಾತಕಾರಿ ವಿಚಾರಗಳನ್ನು ಬರೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುರಭಿ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಆಕೆಯ ತಾಯಿ ಗೀತಾ ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ್ದು, “ಇದೊಂದು ವ್ಯವಸ್ಥಿತ ಲವ್ ಜಿಹಾದ್ ಕೊಲೆ. ಸಂಜಿತ್ ಅಲಿ ನನ್ನ ಮಗಳಿಗೆ ಡ್ರಗ್ಸ್ ದಾಸಿಯನ್ನಾಗಿ ಮಾಡಿ ನಿರಂತರವಾಗಿ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದ” ಎಂದು ಗಂಭೀರವಾಗಿ ಆರೋಪಿಸಿದ್ದಾರೆ. ಸದ್ಯ ಪೊಲೀಸರು ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂಜಿತ್ ಅಲಿ ಚೇತರಿಸಿಕೊಂಡ ಬಳಿಕವೇ ಸಾವಿನ ಹಿಂದಿನ ಅಸಲಿ ಸತ್ಯ ಹೊರಬರಬೇಕಿದೆ.