2019 ರ ಲೋಕಸಭಾ ಚುನಾವಣೆಯಲ್ಲಿ ನಳಿನ್ ಕುಮಾರ್ ಕಟೀಲ್ ಗೆ ತಟ್ಟಲಿದೆಯೇ ಬಂಡಾಯದ ಬಿಸಿ ?

ಮಂಗಳೂರು, ಫೆಬ್ರವರಿ 21: 2019 ರ ಲೋಕಸಭಾ ಚುನಾವಣೆಯ ಮಹಾ ಕದನಕ್ಕೆ ಈಗಾಗಲೇ ವೇದಿಕೆ ಸಿದ್ಧವಾಗಿದೆ.

ದೇಶದಾದ್ಯಂತ ಇದೀಗ ಚುನಾವಣೆಯ ಟ್ರೆಂಡ್ ಜೋರಾಗಿದ್ದು, ಎಲ್ಲಾ ರಾಜಕೀಯ ಪಕ್ಷಗಳು ಚುನಾವಣೆ ಎದುರಿಸಲು ಸಜ್ಜಾಗುತ್ತಿವೆ.

ದಕ್ಷಿಣಕನ್ನಡ ಜಿಲ್ಲೆಯಲ್ಲೂ ಈಗಾಗಲೇ ಚುನಾವಣೆಯ ಪ್ರಚಾರಗಳು ಬೇರೆ ಬೇರೆ ರೂಪದಲ್ಲಿ ನಡೆಯಲಾರಂಭಿಸಿದ್ದು, ಚುನಾವಣೆಯ ದಿನಾಂಕ ಪ್ರಕಟಗೊಂಡ ಬಳಿಕವೇ ಬಹಿರಂಗ ಪ್ರಚಾರ ಆರಂಭಗೊಳ್ಳಲಿದೆ.

ಈ ನಡುವೆ ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್ ಗೆ ಈ ಬಾರಿ ಬಂಡಾಯದ ಬಿಸಿ ತಟ್ಟಲಿದೆ ಎನ್ನುವ ಲಕ್ಷಣಗಳು ಕಂಡು ಬರಲಾರಂಭಿಸಿದೆ.

ಮುಖ್ಯವಾಗಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ವೇಗ ಹೆಚ್ಚಿಸಿ ಕಾಮಗಾರಿಯನ್ನು ಶೀಘ್ರ ಮುಗಿಸುವಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ವಿಫಲರಾಗಿದ್ದಾರೆ ಎನ್ನುವ ಆರೋಪವೂ ಇವರ ಮೇಲಿದೆ.

ಅಲ್ಲದೆ ಪಂಪುವೆಲ್ ಹಾಗೂ ತೊಕ್ಕೋಟ್ ನಲ್ಲಿ ನಿರ್ಮಾಣ ಹಂತದಲ್ಲಿರುವ ಮೇಲ್ಸೇತುವೆಯ ವಿಚಾರವಾಗಿ ವಿರೋಧ ಪಕ್ಷ ಹಾಗೂ ಸ್ವಪಕ್ಷೀಯರಿಂದಲೇ ಅವಮಾನಗಳನ್ನು ಎದುರಿಸುವಂತಹ ಪರಿಸ್ಥಿತಿಯಲ್ಲೂ ಸಂಸದ ನಳಿನ್ ಕುಮಾರ್ ಕಟೀಲ್ ಇದ್ದಾರೆ.

ಈ ನಡುವೆ ನಳಿನ್ ಕುಮಾರ್ ಕಟೀಲ್ ಮತ್ತೆ ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎನ್ನುವುದು ಸ್ಪಷ್ಟವಾಗುತ್ತಿದ್ದಂತೇ ನಳಿನ್ ವಿರೋಧಿ ಬಳಗ ಇದೀಗ ಕಾರ್ಯಪ್ರವೃತ್ತವಾಗಿದೆ.

ಬಿಜೆಪಿ ಹಿಂದುಳಿದ ಮೋರ್ಚಾದ ಮುಖಂಡರಾದ ಸತ್ಯಜಿತ್ ಸುರತ್ಕಲ್ ಅವರನ್ನು ಈ ಬಾರಿ ಸಂಸದ ಸ್ಥಾನದ ಅಭ್ಯರ್ಥಿಯನ್ನಾಗಿ ಮಾಡಬೇಕು ಎನ್ನುವ ಪೋಸ್ಟರ್ ಗಳು, ಬ್ಯಾನರ್ , ಫ್ಲೆಕ್ಸ್ ಗಳು ಈಗಾಗಲೇ ಜಿಲ್ಲೆಯ ಕೆಲವು ಕಡೆಗಳಲ್ಲಿ ರಾರಾಜಿಸತೊಡಗಿವೆ.

ಫೆಕ್ಸ್ ಗಳಲ್ಲಿ ಸತ್ಯಜಿತ್ ಸುರತ್ಕಲ್ ಅವರನ್ನು ಹಿಂದೂ ಮುಖಂಡ,ರಾಷ್ಟ್ರವಾದಿ, ವಿದ್ಯಾವಂತ ಎಂದೂ ಬಣ್ಣಿಸಲಾಗಿದೆ.

ಅದರಲ್ಲೂ ವಿದ್ಯಾವಂತ ಎನ್ನುವ ಮೂಲಕ ಪರೋಕ್ಷವಾಗಿ ನಳಿನ್ ಕುಮಾರ್ ಕಟೀಲ್ ಅವರನ್ನು ಹೀಯಾಳಿಸುವ ಕೆಲಸವೂ ನಡೆದಿದೆ ಎನ್ನಲಾಗುತ್ತಿದೆ.

ಒಟ್ಟಿನಲ್ಲಿ ಲೋಕಸಭಾ ಚುನಾವಣೆಯ ಅಖಾಡ ಸಿದ್ಧಗೊಳ್ಳುತ್ತಿದ್ದಂತೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಬಿಜೆಪಿಯಲ್ಲಿ ಬಂಡಾಯ ಕಾಣಿಸಿಕೊಳ್ಳುವ ಸಾಧ್ಯತೆಗಳು ದಟ್ಟವಾಗಿವೆ.

Facebook Comments

comments