ಹಾಸನ , ಏಪ್ರಿಲ್ 19: ಕಳೆದ ಒಂದು ವಾರದಿಂದ ಬೇಲೂರು ತಾಲೂಕಿನಾದ್ಯಂತ ಮರಣ ಮೃದಂಗ ಬಾರಿಸುತ್ತಿದ್ದ ಭೀಕರ ನರಹಂತಕ ಒಂಟಿಕೋರೆ ಕಾಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಶನಿವಾರ ಮುಂಜಾನೆ ಯಶಸ್ವಿಯಾಗಿ ಸೆರೆಹಿಡಿದಿದ್ದಾರೆ. ತಾಲೂಕಿನ ಕಾನಳ್ಳಿ ಅರಣ್ಯ ವ್ಯಾಪ್ತಿಯಲ್ಲಿ ನಡೆದ ಈ ಸಾಹಸಮಯ ಕಾರ್ಯಾಚರಣೆಯಿಂದಾಗಿ ಮಲೆನಾಡು ಭಾಗದ ಜನರು ನಿಟ್ಟುಸಿರು ಬಿಡುವಂತಾಗಿದೆ.

ಏಪ್ರಿಲ್ 12 ರಂದು ಕಣಗುಪ್ಪೆ ಗ್ರಾಮದ ರೈತ ರಾಜಶೆಟ್ಟಿ (55) ಅವರನ್ನು ಅಮಾನವೀಯವಾಗಿ ತುಳಿದು ಕೊಂದಿದ್ದ ಈ ಸಲಗ, ಈ ಭಾಗದ ಜನರ ಪಾಲಿಗೆ ಸಿಂಹಸ್ವಪ್ನವಾಗಿತ್ತು. ಈ ಘಟನೆಯ ನಂತರ ಕೆರಳಿದ್ದ ಗ್ರಾಮಸ್ಥರು ಶವವನ್ನಿಟ್ಟು ಪ್ರತಿಭಟನೆ ನಡೆಸಿದ್ದರು. ಆನೆಯನ್ನು ಸೆರೆಹಿಡಿಯುವವರೆಗೆ ಶವಸಂಸ್ಕಾರ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಜನರ ಆಕ್ರೋಶಕ್ಕೆ ಮಣಿದ ಸರ್ಕಾರ, ಆನೆಯನ್ನು ಹಿಡಿಯಲು ವಿಶೇಷ ತಂಡವನ್ನು ನಿಯೋಜಿಸಿತ್ತು.

ಕಳೆದ ಬುಧವಾರ (ಏಪ್ರಿಲ್ 15) ನಡೆದಿದ್ದ ಕಾರ್ಯಾಚರಣೆಯಲ್ಲಿ ಆನೆಗೆ ಅರವಳಿಕೆ ನೀಡಿ ಹಗ್ಗ ಕಟ್ಟಲಾಗಿತ್ತು. ಆದರೆ ಅತೀವ ಶಕ್ತಿಯುಳ್ಳ ಈ ಒಂಟಿಕೋರೆ ಸಲಗ ಹಗ್ಗವನ್ನೇ ಕಡಿದುಕೊಂಡು ಕಾಡಿನೊಳಗೆ ಪರಾರಿಯಾಗಿ ಸಿಬ್ಬಂದಿಗೆ ಸವಾಲು ಹಾಕಿತ್ತು. ಅಂದಿನಿಂದ ಡ್ರೋನ್ ಕ್ಯಾಮೆರಾಗಳ ಮೂಲಕ ಆನೆಯ ಚಲನವಲನದ ಮೇಲೆ ತೀವ್ರ ನಿಗಾ ಇಡಲಾಗಿತ್ತು.
ಇಂದು ಮುಂಜಾನೆ ಕಾನಳ್ಳಿ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ಪುನರಾರಂಭಿಸಿದ ಎಲಿಫೆಂಟ್ ಟಾಸ್ಕ್ ಫೋರ್ಸ್ (ETF) ತಂಡಕ್ಕೆ ಹಂತಕ ಸಲಗದ ಜೊತೆಗೆ ‘ಕ್ಯಾಪ್ಟನ್’ ಎಂಬ ಮತ್ತೊಂದು ಬಲಿಷ್ಠ ಕಾಡಾನೆ ಸಾಥ್ ನೀಡುತ್ತಿರುವುದು ಕಂಡುಬಂದಿತು. ಅಭಿಮನ್ಯು ನೇತೃತ್ವದ ಧನಂಜಯ, ಸುಗ್ರೀವ ಹಾಗೂ ಭೀಮ ಒಳಗೊಂಡ ಕುಮ್ಕಿ ಆನೆಗಳ ಪಡೆಯ ಸಹಾಯದಿಂದ ಎರಡು ಕಾಡಾನೆಗಳನ್ನು ಜಾಣ್ಮೆಯಿಂದ ಬೇರ್ಪಡಿಸಲಾಯಿತು. ಬಳಿಕ ನರಹಂತಕ ಸಲಗಕ್ಕೆ ಅರವಳಿಕೆ ಚುಚ್ಚುಮದ್ದು ನೀಡಲಾಯಿತು. ಅರವಳಿಕೆ ಪ್ರಭಾವದಿಂದ ಪ್ರಜ್ಞೆ ತಪ್ಪಿ ಬಿದ್ದ ಆನೆಗೆ ನೀರು ಹಾಕಿ ಆರೈಕೆ ಮಾಡಿದ ಸಿಬ್ಬಂದಿ, ಬಳಿಕ ಭದ್ರವಾಗಿ ಹಗ್ಗಗಳಿಂದ ಕಟ್ಟಿ ಹಾಕಿದ್ದಾರೆ. ಪ್ರಸ್ತುತ ಆನೆಯನ್ನು ಬೃಹತ್ ಲಾರಿಯ ಮೂಲಕ ಸುರಕ್ಷಿತವಾಗಿ ಆನೆ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ