ಕೊಡಗು, ಮಾರ್ಚ್ 13: ಕೊಡಗಿನ ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪದ ಗುಹ್ಯದಲ್ಲಿ ಗುರುವಾರ ಕಾಫಿ ಬೆಳೆಗಾರನನ್ನು ಕೊಂದಿದ್ದ ಕಾಡಾನೆಯನ್ನು ಅರಣ್ಯ ಇಲಾಖೆ ಶುಕ್ರವಾರ ಸೆರೆಹಿಡಿದಿದೆ. 38 ರಿಂದ 40 ವರ್ಷ ವಯಸ್ಸಿನ ಈ ಕಾಡಾನೆಯನ್ನು ಸೆರೆಹಿಡಿದು ಜಿಲ್ಲೆಯ ದುಬಾರೆ ಆನೆ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ.

ಇತ್ತೀಚೆಗೆ ಸಿದ್ದಾಪುರ ಸಮೀಪದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ದಾಳಿ ನಡೆಸಿ ಬಲಿ ಪಡೆದ ನಂತರ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಕಾಡಾನೆಯನ್ನು ತಕ್ಷಣ ಸೆರೆಹಿಡಿಯುವಂತೆ ಸ್ಥಳೀಯರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು. ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ಬೆಳಗ್ಗಿನಿಂದಲೇ ವಿಶೇಷ ಕಾರ್ಯಾಚರಣೆ ಕೈಗೊಂಡರು. ಆರು ಸಾಕಾನೆಗಳ ಸಹಾಯದಿಂದ ಸಿದ್ದಾಪುರ, ಪಾಲಿಬೆಟ್ಟ ಹಾಗೂ ಅಮ್ಮತ್ತಿ ಸುತ್ತಮುತ್ತಲ ಕಾಫಿ ತೋಟಗಳಲ್ಲಿ ಶೋಧ ಕಾರ್ಯ ನಡೆಸಲಾಯಿತು. ಕೊನೆಗೆ ಚೆನ್ನೈನಕೋಟೆ ಸಮೀಪದ ಬಾಡಗ ಬಾಣಂಗಾಲ ಪ್ರದೇಶದ ಕಾಫಿ ತೋಟದಲ್ಲಿ ಒಂಟಿ ಸಲಗ ಪತ್ತೆಯಾಗಿ, ಅರವಳಿಕೆ ನೀಡಿ ಅದನ್ನು ಸೆರೆಹಿಡಿಯಲಾಯಿತು.
ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕಾಡಾನೆ–ಮಾನವ ಸಂಘರ್ಷ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕೆಲ ದಿನಗಳ ಹಿಂದಷ್ಟೇ ಕುಶಾಲನಗರ ತಾಲೂಕಿನ ವಾಲ್ನೂರು ಸಮೀಪ ಮಹಿಳೆಯೊಬ್ಬರು ಕಾಡಾನೆ ದಾಳಿಗೆ ಬಲಿಯಾಗಿದ್ದ ಘಟನೆ ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಸಮಸ್ಯೆ ಉಂಟುಮಾಡುವ ಕಾಡಾನೆಗಳನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಕ್ರಮಗಳನ್ನು ಕೈಗೊಳ್ಳುತ್ತಿದೆ. ನರಹಂತಕ ಕಾಡಾನೆ ಸೆರೆಹಿಡಿದ ಹಿನ್ನೆಲೆ ಕಳೆದ ಹಲವು ದಿನಗಳಿಂದ ಭಯಭೀತರಾಗಿದ್ದ ವಿರಾಜಪೇಟೆ ಭಾಗದ ಗ್ರಾಮಸ್ಥರು ನಿಟ್ಟುಸಿರುಬಿಟ್ಟಿದ್ದಾರೆ