ಮೈಸೂರು ಮಾರ್ಚ್ 30: ಜಿಲ್ಲೆಯ ಸರಗೂರು ತಾಲೂಕಿನ ನುಗು ಜಲಾಶಯದ ವ್ಯಾಪ್ತಿಯಲ್ಲಿ ಸೋಮವಾರ ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿ ಸಾರ್ವಜನಿಕರಲ್ಲಿ ತೀವ್ರ ಆತಂಕ ಸೃಷ್ಟಿಸಿವೆ. ಆನೆಗಳನ್ನು ಮರಳಿ ಕಾಡಿಗೆ ಅಟ್ಟುವ ಕಾರ್ಯಾಚರಣೆಯ ವೇಳೆ, ಆಕ್ರೋಶಗೊಂಡ ಕಾಡಾನೆಯೊಂದು ಅರಣ್ಯ ಇಲಾಖೆಯ ಜೀಪಿನ ಮೇಲೆ ದಾಳಿ ನಡೆಸಿದ್ದು, ವಾಹನ ಜಖಂಗೊಂಡಿದೆ.

ಸೋಮವಾರ ಬೆಳಿಗ್ಗೆ ಕಾಡಿನಿಂದ ಹೊರಬಂದ ಕಾಡಾನೆಗಳು ನುಗು ಜಲಾಶಯದ ಸಮೀಪದ ಮುಖ್ಯ ರಸ್ತೆಗೆ ಹಠಾತ್ ನುಗ್ಗಿವೆ. ರಸ್ತೆಯ ಮಧ್ಯೆಯೇ ಆನೆಗಳು ಬೀಡುಬಿಟ್ಟಿದ್ದರಿಂದ ವಾಹನ ಸವಾರರು ಹಾಗೂ ಸ್ಥಳೀಯ ನಿವಾಸಿಗಳು ಭಯಭೀತರಾಗಿದ್ದರು. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ, ಸಾರ್ವಜನಿಕರ ರಕ್ಷಣೆಗಾಗಿ ಆನೆಗಳನ್ನು ಹಿಮ್ಮೆಟ್ಟಿಸುವ ಕಾರ್ಯಾಚರಣೆಯನ್ನು ಆರಂಭಿಸಿದರು.
ಸಿಬ್ಬಂದಿ ಆನೆಗಳನ್ನು ಕಾಡಿನತ್ತ ಓಡಿಸಲು ಮುಂದಾದ ಸಮಯದಲ್ಲಿ, ಗಜಪಡೆಯಲ್ಲಿದ್ದ ಆನೆಯೊಂದು ಏಕಾಏಕಿ ಇಲಾಖೆಯ ಜೀಪಿನ ಮೇಲೆರಗಿದೆ. ಆನೆಯ ಬಲವಾದ ಹೊಡೆತಕ್ಕೆ ಸಿಲುಕಿದ ಜೀಪಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಅದೃಷ್ಟವಶಾತ್ ಜೀಪ್ ಚಾಲಕ ಸಮಯಪ್ರಜ್ಞೆ ಮೆರೆದಿದ್ದರಿಂದ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ. ಘಟನೆಯ ನಂತರ ಎಚ್ಚೆತ್ತ ಅರಣ್ಯ ಇಲಾಖೆಯ ಮತ್ತಷ್ಟು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಹರಸಾಹಸ ಪಟ್ಟು ಕಾಡಾನೆಗಳನ್ನು ಮರಳಿ ಅರಣ್ಯದೊಳಕ್ಕೆ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಪರಿಸ್ಥಿತಿ ಹತೋಟಿಯಲ್ಲಿದ್ದು, ಜಲಾಶಯದ ಅಂಚಿನ ಗ್ರಾಮಸ್ಥರು ಹಾಗೂ ಪ್ರವಾಸಿಗರು ಎಚ್ಚರಿಕೆಯಿಂದ ಇರುವಂತೆ ಇಲಾಖೆಯು ಸೂಚನೆ ನೀಡಿದೆ.