ಗ್ವಾಲಿಯರ್, ಏಪ್ರಿಲ್ 27: ಕೇವಲ ಒಂದು ಫೋಟೋ ಇಟ್ಟುಕೊಂಡು ಪತಿಯ ಸ್ವಂತ ಸಹೋದರಿಯನ್ನೇ ಆತನ ಎರಡನೇ ಹೆಂಡತಿ ಎಂದು ಬಿಂಬಿಸಿ ಮಹಿಳೆಯೊಬ್ಬಳು ಏಕಪಕ್ಷೀಯ ವಿಚ್ಛೇದನ ಪಡೆದಿರುವ ವಿಚಿತ್ರ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ನಡೆದಿದೆ.

ದಂಪತಿ ವಿಚ್ಛೇದನ ಕೋರಿ ನ್ಯಾಯಾಲಯದ ಮೆಟ್ಟಿಲೇರಿದಾಗ ಸಾಮಾನ್ಯವಾಗಿ ಕೌಟುಂಬಿಕ ಹಿಂಸೆ, ವರದಕ್ಷಿಣೆ ಕಿರುಕುಳ ಅಥವಾ ಕೌಟುಂಬಿಕ ಕಲಹಗಳ ಆರೋಪಗಳು ಕೇಳಿಬರುತ್ತವೆ. ಆದರೆ ಮಧ್ಯಪ್ರದೇಶದಲ್ಲಿ ಪತ್ನಿಯೊಬ್ಬಳು ವಿಚ್ಛೇದನ ಪಡೆಯಲು ಯಾರೂ ಊಹಿಸಲಾಗದಂತಹ ಅಡ್ಡದಾರಿ ಹಿಡಿದಿದ್ದಾಳೆ. ತನ್ನ ಗಂಡನ ಸ್ವಂತ ತಂಗಿಯನ್ನೇ ಆತನ ಎರಡನೇ ಹೆಂಡತಿ ಎಂದು ನ್ಯಾಯಾಲಯವನ್ನು ನಂಬಿಸಿ ಡಿವೋರ್ಸ್ ಪಡೆದಿದ್ದಾಳೆ!
ಇದೀಗ ಈ ಪ್ರಕರಣ ಮಧ್ಯಪ್ರದೇಶ ಹೈಕೋರ್ಟ್ನ ಗ್ವಾಲಿಯರ್ ಪೀಠದ ಮೆಟ್ಟಿಲೇರಿದ್ದು, ತನ್ನ ಪತ್ನಿ ಸುಳ್ಳು ಸಾಕ್ಷ್ಯ ನೀಡಿ ಏಕಪಕ್ಷೀಯವಾಗಿ ವಿಚ್ಛೇದನ ಪಡೆದಿದ್ದಾಳೆ ಎಂದು ಆರೋಪಿಸಿ ಪತಿ ಹೈಕೋರ್ಟ್ ಮೊರೆ ಹೋಗಿದ್ದಾನೆ.
ಗ್ವಾಲಿಯರ್ ನಿವಾಸಿಯಾಗಿರುವ ಮಹಿಳೆ 1998 ರಲ್ಲಿ ಮಾರ್ಕೆಟಿಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ವಿವಾಹವಾಗಿದ್ದಳು. ಪತಿಯ ಕೆಲಸದ ನಿಮಿತ್ತ ಆತ ಹೆಚ್ಚಾಗಿ ಮನೆಯಿಂದ ದೂರ ಇರುತ್ತಿದ್ದ. ಇದೇ ವಿಚಾರವಾಗಿ ದಂಪತಿ ನಡುವೆ ಕ್ರಮೇಣ ಭಿನ್ನಾಭಿಪ್ರಾಯಗಳು ಮೂಡಿದ್ದವು. ಹೀಗಾಗಿ 2015 ರಿಂದ ಪತ್ನಿ ತನ್ನ ಗಂಡನಿಂದ ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದ್ದಳು. ಪತ್ನಿಯು ಹೇಗಾದರೂ ಮಾಡಿ ವಿಚ್ಛೇದನ ಪಡೆಯಲೇಬೇಕೆಂದು ಪಟ್ಟು ಹಿಡಿದಿದ್ದಳು. ಆದರೆ ಗಂಡನಿಗೆ ವಿಚ್ಛೇದನ ನೀಡಲು ಇಷ್ಟವಿರಲಿಲ್ಲ. 2021ರಲ್ಲಿ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ ಪತ್ನಿ, ತನ್ನ ಗಂಡ ಎರಡನೇ ಮದುವೆಯಾಗಿದ್ದಾನೆ ಎಂದು ಆರೋಪಿಸಿದಳು.
ಇದಕ್ಕೆ ಸಾಕ್ಷಿಯಾಗಿ, ಕೌಟುಂಬಿಕ ಕಾರ್ಯಕ್ರಮವೊಂದರಲ್ಲಿ ತನ್ನ ಗಂಡ ತನ್ನ ಸಹೋದರಿ (ತಂಗಿ) ಹಾಗೂ ಇತರ ಸಂಬಂಧಿಕರೊಂದಿಗೆ ನಿಂತಿರುವ ಗ್ರೂಪ್ ಫೋಟೋವನ್ನು ನ್ಯಾಯಾಲಯಕ್ಕೆ ಸಲ್ಲಿಸಿದಳು. ಫೋಟೋದಲ್ಲಿ ಗಂಡನ ಪಕ್ಕದಲ್ಲಿ ನಿಂತಿದ್ದ ಆತನ ಸ್ವಂತ ತಂಗಿಯನ್ನೇ ಇವಳೇ ಆತನ ಎರಡನೇ ಹೆಂಡತಿ ಎಂದು ವಾದಿಸಿದಳು! ಈ ಹಸಿ ಸುಳ್ಳನ್ನೇ ನಂಬಿದ ಕೌಟುಂಬಿಕ ನ್ಯಾಯಾಲಯವು ಮಹಿಳೆಯ ಪರವಾಗಿ ತೀರ್ಪು ನೀಡಿತು.
ಈ ಪ್ರಕರಣದಲ್ಲಿ ಗಂಡನಿಗೆ ತನ್ನ ವಾದ ಮಂಡಿಸಲು ಅವಕಾಶವೇ ಸಿಗಲಿಲ್ಲ. ಕೇವಲ ಆಕೆಯ ಹೇಳಿಕೆ ಮತ್ತು ಫೋಟೋ ಆಧಾರದ ಮೇಲೆ ಗ್ವಾಲಿಯರ್ ಕೌಟುಂಬಿಕ ನ್ಯಾಯಾಲಯವು ಏಕಪಕ್ಷೀಯವಾಗಿ ವಿಚ್ಛೇದನ ಮಂಜೂರು ಮಾಡಿತು. ಏಪ್ರಿಲ್ ಮೊದಲ ವಾರದಲ್ಲಿ ವಿಚ್ಛೇದನದ ಆದೇಶದ ಬಗ್ಗೆ ತಿಳಿದಾಗ ಗಂಡನಿಗೆ ಅಕ್ಷರಶಃ ಆಘಾತವಾಯಿತು. ನ್ಯಾಯಾಲಯದ ದಾಖಲೆಗಳನ್ನು ಪರಿಶೀಲಿಸಿದಾಗ, ತನ್ನ ಸ್ವಂತ ತಂಗಿಯನ್ನೇ ಎರಡನೇ ಹೆಂಡತಿ ಎಂದು ಬಿಂಬಿಸಿರುವುದು ಆತನ ಗಮನಕ್ಕೆ ಬಂದಿದೆ.
ಇದೀಗ ಪತಿಯು ಕೌಟುಂಬಿಕ ನ್ಯಾಯಾಲಯದ ಏಕಪಕ್ಷೀಯ ವಿಚ್ಛೇದನ ಆದೇಶವನ್ನು ಪ್ರಶ್ನಿಸಿ ಮಧ್ಯಪ್ರದೇಶ ಹೈಕೋರ್ಟ್ನ ಗ್ವಾಲಿಯರ್ ಪೀಠದ ಮೊರೆ ಹೋಗಿದ್ದಾನೆ. ಸರ್ಕಾರಿ ವಕೀಲ ಧರ್ಮೇಂದ್ರ ಶರ್ಮಾ ಈ ಬಗ್ಗೆ ಮಾಹಿತಿ ನೀಡಿದ್ದು, ಪತ್ನಿಯು ನ್ಯಾಯಾಲಯದ ಹಾದಿ ತಪ್ಪಿಸಿದ್ದಾಳೆ ಮತ್ತು ಸುಳ್ಳು ಸಾಕ್ಷ್ಯ ನೀಡಿ ವಿಚ್ಛೇದನ ಆದೇಶವನ್ನು ಪಡೆದಿದ್ದಾಳೆ ಎಂದು ಪತಿ ಆರೋಪಿಸಿದ್ದಾರೆ ಎಂದಿದ್ದಾರೆ. ಪ್ರಸ್ತುತ ಹೈಕೋರ್ಟ್ ಈ ಅರ್ಜಿಯ ವಿಚಾರಣೆ ನಡೆಸುತ್ತಿದ್ದು, ತಪ್ಪು ಮಾಹಿತಿಯ ಆಧಾರದ ಮೇಲೆ ನೀಡಲಾಗಿರುವ ವಿಚ್ಛೇದನ ಆದೇಶವನ್ನು ರದ್ದುಗೊಳಿಸುವಂತೆ ಪತಿ ಮನವಿ ಮಾಡಿದ್ದಾರೆ.