ಚಿಕ್ಕಬಳ್ಳಾಪುರ,ಮಾರ್ಚ್ 29: ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಒಂದು ಭಯಾಕನ ಘಟನೆ ನಡೆದಿದೆ. ತನ್ನ ಗಂಡನನ್ನು ಕೊಲೆ ಮಾಡಿ ನಾಟಕವಾಡಿದ್ದ ಕಿಲಾಡಿ ಹೆಂಡತಿಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ನಾಲ್ಕು ಜನರು ಎಸ್ಕೇಪ್ ಆಗಿದ್ದು, ಪೊಲೀಸರು ಎರಡು ತಂಡಗಳನ್ನ ರಚನೆ ಮಾಡಿ ಬಂಧನಕ್ಕೆ ಬಲೆ ಬೀಸಿದ್ದಾರೆ.

ನಗರದ ವಿ.ವಿ. ಪುರಂ ಬಡಾವಣೆಯ ಬಾಡಿಗೆ ಮನೆಯಲ್ಲಿ ವಾಸವಿದ್ದ ಶಿವಕುಮಾರ್ (ಅಲಿಯಾಸ್ ಸಾದೀಕ್ ಪಾಷಾ) ಅವರ ಸಾವು ಮೊದ ಮೊದಲು ಆಕಸ್ಮಿಕ ಎನಿಸಿತ್ತು. ಪತ್ನಿ ರೇಷ್ಮಾ ಸಂಬಂಧಿಕರಿಗೆ ಕರೆ ಮಾಡಿ, ತನ್ನ ಪತಿ ಮನೆಯಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಎದೆಬಡಿದುಕೊಂಡು ಅತ್ತಿದ್ದಳು. ಈಕೆಯ ಕಣ್ಣೀರು ಕಂಡು ಮರುಗಿದ ಅಕ್ಕಪಕ್ಕದ ಮನೆಯವರು ಕೂಡ ಇದು ವಿಧಿಯ ಆಟವೆಂದೇ ಭಾವಿಸಿದ್ದರು.
ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಗೌರಿಬಿದನೂರು ನಗರ ಠಾಣೆಯ ಪೊಲೀಸರಿಗೆ ಮನೆಯ ಒಳಗೆ ಕಾಲಿಡುತ್ತಿದ್ದಂತೆ ಅನುಮಾನ ಮೂಡಿತು. ಅಲ್ಲಿ ಕಂಡ ದೃಶ್ಯ ಅತ್ಯಂತ ಭಯಾನಕವಾಗಿತ್ತು. ಶಿವಕುಮಾರ್ ಅವರ ಕೈಕಾಲುಗಳನ್ನು ಬಲವಂತವಾಗಿ ತಿರುಚಲಾಗಿತ್ತು, ಸೊಂಟ ಮುರಿದು ಹೋಗಿತ್ತು. ಕೇವಲ ಮಂಚದಿಂದ ಬಿದ್ದ ವ್ಯಕ್ತಿಗೆ ಇಂತಹ ಗಾಯಗಳಾಗಲು ಸಾಧ್ಯವೇ ಇಲ್ಲ ಎಂಬುದು ಪೊಲೀಸರಿಗೆ ಖಚಿತವಾಯಿತು. ಅಷ್ಟೇ ಅಲ್ಲದೆ, ಹಂತಕರು ರಕ್ತದ ಕಲೆಗಳನ್ನು ಅಳಿಸಿ ಹಾಕಲು ಇಡೀ ಮನೆಯನ್ನು ಆ್ಯಸಿಡ್ ಹಾಕಿ ತೊಳೆದಿದ್ದರು.
ಪೊಲೀಸರ ಹದ್ದಿನ ಕಣ್ಣಿನಿಂದ ತಪ್ಪಿಸಿಕೊಳ್ಳಲು ರೇಷ್ಮಾ ಎಷ್ಟೇ ಪ್ರಯತ್ನಿಸಿದರೂ, ತೀವ್ರ ವಿಚಾರಣೆಯ ಮುಂದೆ ಆಕೆಯ ನಾಟಕ ಹೆಚ್ಚು ಕಾಲ ನಡೆಯಲಿಲ್ಲ. ಪತಿ ಶಿವಕುಮಾರ್ ನೀಡುತ್ತಿದ್ದ ಎನ್ನಲಾದ ಕಿರಕುಳದಿಂದ ಬೇಸತ್ತು, ತನ್ನ ಸ್ವಂತ ತಮ್ಮ ಶಾರುಕ್ ಹಾಗೂ ಇತರ ಮೂವರ ಜೊತೆ ಸೇರಿ ಸ್ಕೆಚ್ ಹಾಕಿ ಪತಿಯನ್ನೇ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಸಂಸಾರದ ನೊಗ ಹೊರಬೇಕಿದ್ದ ಕೈಗಳೇ ಪತಿಯ ಗಂಟಲು ಹಿಸುಕಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ.
ಪ್ರಸ್ತುತ ಪತ್ನಿ ರೇಷ್ಮಾಳನ್ನು ಪೊಲೀಸರು ಬಂಧಿಸಿದ್ದು, ಕೃತ್ಯದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಆಕೆಯ ತಮ್ಮ ಶಾರುಕ್ ಸೇರಿದಂತೆ ನಾಲ್ವರು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಸಂಸಾರವೆಂಬ ಪವಿತ್ರ ಬಂಧನದಲ್ಲಿ ನಡೆದ ಈ ಹತ್ಯೆ ಇಡೀ ನಗರವನ್ನೇ ಬೆಚ್ಚಿಬೀಳಿಸಿದೆ.