ಲಂಡನ್, ಮಾರ್ಚ್ 14: ಇಂಗ್ಲೆಂಡ್ನಲ್ಲಿ ನಡೆಯುವ The Hundred ಟೂರ್ನಿಯ 2026ರ ಆಟಗಾರರ ಹರಾಜಿನಲ್ಲಿ ಪಾಕಿಸ್ತಾನದ ಮಿಸ್ಟರಿ ಸ್ಪಿನ್ನರ್ Abrar Ahmed ಅವರನ್ನು ಫ್ರಾಂಚೈಸಿ ತಂಡ ಆಯ್ಕೆ ಮಾಡಿಕೊಂಡ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವಿವಾದ ತಲೆದೋರಿದೆ. ಈ ತಂಡವು Sunrisers Hyderabad ಫ್ರಾಂಚೈಸಿಗೆ ಸಂಬಂಧ ಹೊಂದಿರುವುದರಿಂದ, ಅದರ ಮಾಲೀಕತ್ವ ವಲಯದ ಪ್ರಮುಖ ವ್ಯಕ್ತಿಯಾಗಿರುವ Kavya Maran ವಿರುದ್ಧ ಕೆಲ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹರಾಜಿನಲ್ಲಿ Sunrisers Leeds ತಂಡವು ಅಬ್ರಾರ್ ಅಹ್ಮದ್ ಅವರನ್ನು ಖರೀದಿಸಿದ ಬಳಿಕ ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಚರ್ಚೆಗೆ ಕಾರಣವಾಯಿತು. ಭಾರತ ಮತ್ತು ಪಾಕಿಸ್ತಾನ ನಡುವಿನ ರಾಜಕೀಯ ಉದ್ವಿಗ್ನತೆ ಹಿನ್ನೆಲೆ, ಭಾರತೀಯ ಫ್ರಾಂಚೈಸಿಗೆ ಸಂಬಂಧಿಸಿದ ತಂಡ ಪಾಕಿಸ್ತಾನ ಆಟಗಾರರನ್ನು ಆಯ್ಕೆ ಮಾಡಿರುವುದನ್ನು ಕೆಲ ಅಭಿಮಾನಿಗಳು ಪ್ರಶ್ನಿಸಿದ್ದಾರೆ. ಆದರೆ ಕ್ರಿಕೆಟ್ ವಲಯದ ಮೂಲಗಳ ಪ್ರಕಾರ, ಈ ಆಯ್ಕೆ ಭಾರತದ Indian Premier League ಗೆ ಸಂಬಂಧಿಸಿದದ್ದಲ್ಲ. ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಆಯೋಜಿಸುವ ‘ದಿ ಹಂಡ್ರೆಡ್’ ಟೂರ್ನಿಗೆ ಮಾತ್ರ ಸಂಬಂಧಿಸಿದ್ದು, ಐಪಿಎಲ್ ಪಂದ್ಯಗಳಿಗೆ ಇದರ ನೇರ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಕೆಲವರು ಫ್ರಾಂಚೈಸಿಯ ನಿರ್ಧಾರವನ್ನು ಟೀಕಿಸಿದರೆ, ಮತ್ತೊಬ್ಬರು ಕ್ರೀಡೆಯನ್ನು ರಾಜಕೀಯದಿಂದ ದೂರವಿರಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.