ಅಮೆರಿಕಾ,ಮಾರ್ಚ್ 13: ಅಮೆರಿಕದಲ್ಲಿ ಬಹುಮಿಲಿಯನ್ ಡಾಲರ್ ವಂಚನೆ ಪ್ರಕರಣದಲ್ಲಿ ಭಾರತೀಯ ಮೂಲದ ಇಬ್ಬರು ಸಹೋದರರು ತಪ್ಪಿತಸ್ಥರೆಂದು ಫೆಡರಲ್ ನ್ಯಾಯಾಲಯ ತೀರ್ಪು ನೀಡಿದೆ. ಹಲವು ಗಂಭೀರ ಆರೋಪಗಳು ಸಾಬೀತಾಗಿರುವ ಹಿನ್ನೆಲೆ, ಅವರಿಗೆ ಒಟ್ಟಾರೆ 400 ವರ್ಷಗಳವರೆಗೆ ಜೈಲು ಶಿಕ್ಷೆ ಎದುರಾಗುವ ಸಾಧ್ಯತೆ ಇದೆ ಎಂಬ ಮಾಹಿತಿ ಹೊರಬಂದಿದೆ.

ಆರೋಪಿಗಳಾದ ಭಾಸ್ಕರ್ ಸಾವಾಣಿ (60) ಮತ್ತು ಅರುಣ್ ಸಾವಾಣಿ (58) ಪೆನ್ಸಿಲ್ವೇನಿಯಾ ರಾಜ್ಯದಲ್ಲಿ ವ್ಯವಹಾರ ನಡೆಸುತ್ತಿದ್ದವರು. “ಸಾವಾಣಿ ಗ್ರೂಪ್” ಹೆಸರಿನಲ್ಲಿ ಹಲವು ಕಂಪನಿಗಳನ್ನು ಸ್ಥಾಪಿಸಿ, ಅಮೆರಿಕದ H-1B ವೀಸಾ ವ್ಯವಸ್ಥೆ ಮತ್ತು ಆರೋಗ್ಯ ಸೇವಾ ಯೋಜನೆಗಳಲ್ಲಿ ವಂಚನೆ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತನಿಖಾ ಸಂಸ್ಥೆಗಳ ಪ್ರಕಾರ, ಈ ಇಬ್ಬರು ಸಹೋದರರು ನಕಲಿ ದಾಖಲೆಗಳು ಮತ್ತು ಕೃತಕ ಕಂಪನಿಗಳ ಮೂಲಕ ವೀಸಾ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡು, ಸರ್ಕಾರದ ಆರೋಗ್ಯ ಯೋಜನೆಗಳಿಂದ ಕೋಟ್ಯಾಂತರ ಡಾಲರ್ ಹಣವನ್ನು ಅಕ್ರಮವಾಗಿ ಪಡೆದುಕೊಂಡಿದ್ದಾರೆ. ಜೊತೆಗೆ ಹಣದ ಅಕ್ರಮ ವರ್ಗಾವಣೆ (ಮನಿ ಲಾಂಡರಿಂಗ್) ಹಾಗೂ ತೆರಿಗೆ ವಂಚನೆ ಆರೋಪಗಳೂ ಸಾಬೀತಾಗಿವೆ. ಈ ಪ್ರಕರಣದಲ್ಲಿ ವಂಚನೆಯ ಮೊತ್ತವು ಸುಮಾರು 30 ಮಿಲಿಯನ್ ಡಾಲರ್ಗಿಂತ ಹೆಚ್ಚು ಎಂದು ತನಿಖೆಯಲ್ಲಿ ಬಹಿರಂಗವಾಗಿದೆ. ಪ್ರಕರಣದ ವಿಚಾರಣೆ ನಡೆಸಿದ ಫೆಡರಲ್ ನ್ಯಾಯಾಲಯ ಹಲವು ಆರೋಪಗಳನ್ನು ದೃಢಪಡಿಸಿದ್ದು, ಪ್ರತಿ ಆರೋಪಕ್ಕೂ ಪ್ರತ್ಯೇಕವಾಗಿ ಶಿಕ್ಷೆ ವಿಧಿಸಬಹುದಾದ ಕಾರಣ ಒಟ್ಟಾರೆ 400 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಆದರೆ ಅಂತಿಮ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ಮುಂದಿನ ಶಿಕ್ಷಾ ವಿಚಾರಣೆ (sentencing hearing) ವೇಳೆ ನಿರ್ಧರಿಸಲಿದ್ದು, ಆಗ ನಿಖರವಾದ ಶಿಕ್ಷೆ ಘೋಷಣೆ ಆಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.