ವಾಷಿಂಗ್ಟನ್, ಮಾರ್ಚ್ 26: ಇರಾನ್ ತನ್ನ ಹಠಮಾರಿ ಧೋರಣೆಯನ್ನು ಬಿಟ್ಟು ಕೂಡಲೇ ಶರಣಾಗದಿದ್ದರೆ, ಆ ದೇಶವು ಹಿಂದೆಂದೂ ಕಾಣದ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅಮೆರಿಕದ ಶ್ವೇತಭವನ ಎಚ್ಚರಿಸಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ವಿಷಯದಲ್ಲಿ ಅತ್ಯಂತ ಕಠಿಣ ನಿಲುವು ತಳೆದಿದ್ದು, ಸಂಧಾನಕ್ಕೆ ಒಪ್ಪದಿದ್ದರೆ ‘ನರಕ ದರ್ಶನ’ ಮಾಡಿಸಲು ಸಿದ್ಧರಾಗಿದ್ದಾರೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ತಿಳಿಸಿದ್ದಾರೆ.

ಕಳೆದ ಕೆಲವು ವಾರಗಳಿಂದ ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ತಾರಕಕ್ಕೇರಿದೆ. ಈ ಮಧ್ಯೆ ಮಧ್ಯಪ್ರವೇಶಿಸಿರುವ ಟ್ರಂಪ್ ಆಡಳಿತವು, ಇರಾನ್ ತನ್ನ ಪರಮಾಣು ಚಟುವಟಿಕೆಗಳನ್ನು ಮತ್ತು ಭಯೋತ್ಪಾದಕ ಗುಂಪುಗಳಿಗೆ ನೀಡುತ್ತಿರುವ ಬೆಂಬಲವನ್ನು ತಕ್ಷಣವೇ ನಿಲ್ಲಿಸಬೇಕೆಂದು ತಾಕೀತು ಮಾಡಿದೆ. ಇರಾನ್ ದೇಶವು ಅಮೆರಿಕ ವಿಧಿಸಿರುವ ಷರತ್ತುಗಳಿಗೆ ಒಪ್ಪದಿದ್ದರೆ, ಆ ದೇಶದ ತೈಲ ರಫ್ತು ಮತ್ತು ಆರ್ಥಿಕ ಮೂಲಗಳ ಮೇಲೆ ಅತ್ಯಂತ ಕಠಿಣ ದಾಳಿ ನಡೆಸಲು ಶ್ವೇತಭವನ ಯೋಜನೆ ರೂಪಿಸಿದೆ.
“ನಮ್ಮ ಅಧ್ಯಕ್ಷರು ಕೇವಲ ಮಾತನಾಡುತ್ತಿಲ್ಲ, ಅವರು ಕ್ರಿಯೆಯಲ್ಲಿ ನಂಬಿಕೆ ಉಳ್ಳವರು. ಇರಾನ್ ಶರಣಾಗತಿಯ ಸಂಕೇತ ನೀಡದಿದ್ದರೆ ‘ಆಪರೇಷನ್ ಎಪಿಕ್ ಫ್ಯೂರಿ’ ಮೂಲಕ ಆ ದೇಶದ ಮಿಲಿಟರಿ ಶಕ್ತಿಯನ್ನು ಸಂಪೂರ್ಣವಾಗಿ ಹತ್ತಿಕ್ಕಲಾಗುವುದು,” ಎಂದು ಲೀವಿಟ್ ಪತ್ರಿಕಾಗೋಷ್ಠಿಯಲ್ಲಿ ಗುಡುಗಿದ್ದಾರೆ. ಶ್ವೇತಭವನದ ಈ ಹೇಳಿಕೆಯ ಬೆನ್ನಲ್ಲೇ ಜಾಗತಿಕ ರಾಜಕೀಯದಲ್ಲಿ ಸಂಚಲನ ಸೃಷ್ಟಿಯಾಗಿದ್ದು, ವಿಶ್ವಸಂಸ್ಥೆಯು ಸಂಘರ್ಷವನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳುವಂತೆ ಮನವಿ ಮಾಡಿದೆ.ಅಮೆರಿಕದ ಬೆದರಿಕೆಗೆ ಮಣಿಯುವ ಪ್ರಶ್ನೆಯೇ ಇಲ್ಲ ಎಂದು ಇರಾನ್ ವಿದೇಶಾಂಗ ಇಲಾಖೆ ಹೇಳಿದೆ. ತನ್ನ ಸಾರ್ವಭೌಮತ್ವದ ರಕ್ಷಣೆಗಾಗಿ ಯಾವುದೇ ಸವಾಲನ್ನು ಎದುರಿಸಲು ಸಿದ್ಧವಿರುವುದಾಗಿ ಇರಾನ್ ಘೋಷಿಸಿದೆ.
ಒಂದು ವೇಳೆ ಅಮೆರಿಕ ತನ್ನ ಎಚ್ಚರಿಕೆಯಂತೆ ಮಿಲಿಟರಿ ಕ್ರಮ ಕೈಗೊಂಡರೆ, ಅದು ಕೇವಲ ಇರಾನ್ ಮೇಲೆ ಮಾತ್ರವಲ್ಲದೆ ಇಡೀ ಜಗತ್ತಿನ ಕಚ್ಚಾ ತೈಲ ಪೂರೈಕೆ ಮತ್ತು ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.