ನವದೆಹಲಿ ಡಿಸೆಂಬರ್ 04: ಡಿಜಿಸಿಎ ದ ಹೊಸ ನೀತಿಯಿಂದಾಗಿ ಪೈಲೆಟ್ ಹಾಗೂ ಸಿಬ್ಬಂದಿ ಕೊರೆತೆಗೆ ದೇಶದ ಅತೀ ದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋದ ಬರೊಬ್ಬರಿ 200 ವಿಮಾನಗಳ ಹಾರಾಟವನ್ನು ರದ್ದುಗೊಳಿಸಿದೆ. ದಿಢೀರ್ ಅವ್ಯವಸ್ಥೆಯಿಂದಾಗಿ ದೇಶಾದ್ಯಂತ ಪ್ರಯಾಣಿಕರು ತತ್ತರಿಸಿ ಹೋಗಿದ್ದಾರೆ.
ಬೆಂಗಳೂರು, ದೆಹಲಿ, ಮುಂಬೈ, ಹೈದರಾಬಾದ್ ಸೇರಿದಂತೆ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಸಾವಿರಾರು ಪ್ರಯಾಣಿಕರು ಗಂಟೆಗಟ್ಟಲೆ ಕಾದು ಕಾದು ಸುಸ್ತಾಗಿದ್ದಾರೆ.

ಮೂಲಗಳ ಪ್ರಕಾರ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಟ್ಟು 42 ದೇಶೀಯ ವಿಮಾನಗಳು ರದ್ದಾಗಿದ್ದು ಈ ಪೈಕಿ 22 ಆಗಮನ, 20 ನಿರ್ಗಮನ ವಿಮಾನಗಳು ರದ್ದಾಗಿವೆ.
ಅಂತೆಯೇ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ 67 ವಿಮಾನಗಳು ರದ್ದಾಗಿದ್ದು, ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ವಿಮಾನ ನಿಲ್ದಾಣದಲ್ಲಿ 51ಕ್ಕೂ ಹೆಚ್ಚು ವಿಮಾನಗಳು ರದ್ದಾಗಿದೆ. ಮುತ್ತಿನ ನಗರಿ ಹೈದರಾಬಾದ್‌ನಲ್ಲಿ 19 ಇಂಡಿಗೋ ವಿಮಾನಗಳು ರದ್ದಾಗಿವೆ ಎಂದು ತಿಳಿದುಬಂದಿದೆ.
ಈ ವಾರ ದೆಹಲಿ ಮತ್ತು ಮುಂಬೈನಲ್ಲಿ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆ ಎಮಿರೇಟ್ಸ್ ನಡೆಸಿದ ಬೃಹತ್ ನೇಮಕಾತಿ ಪ್ರಕ್ರಿಯೆಯಿಂದಾಗಿ ಈ ಕೊರತೆ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ.
ವಿಶ್ಲೇಷಕರು ಅಭಿಪ್ರಾಯಪಟ್ಟಿರುವಂತೆ, ತಾಂತ್ರಿಕ ದೋಷಗಳು ಮತ್ತು ಹೊಸ ಎಫ್‌ಡಿಟಿಎಲ್ (ಫ್ಲೈಟ್ ಡ್ಯೂಟಿ ಟೈಮ್ ಲಿಮಿಟೇಷನ್) ನಿಯಮಗಳು ವಿಮಾನಗಳ ರದ್ಧತಿಗೆ ಮುಖ್ಯ ಕಾರಣ ಎಂದು ಹೇಳಲಾಗಿದೆ. ಅಂತೆಯೇ ಚಳಿಗಾಲದಲ್ಲಿ ವೇಳಾಪಟ್ಟಿ ಬದಲಾವಣೆ, ಹವಾಮಾನ ಸಮಸ್ಯೆ ಕೂಡ ವಿಮಾನ ರದ್ದತಿಗೆ ಕಾರಣವಾಗಿದ್ದು, ಇದು ವಿಮಾನ ನಿಲ್ದಾಣದಲ್ಲಿ ದಟ್ಟಣೆಗೆ ಕಾರಣವಾಗಿದೆ.



