Connect with us

  DAKSHINA KANNADA

  ಸಿಎಂ ಸಿದ್ದರಾಮಯ್ಯ ಮಂಡಿಸಿದ ರಾಜ್ಯ ಬಜೆಟ್ ಬಗ್ಗೆ ಕರಾವಳಿಯ ನೇತಾರರು ಏನಂದ್ರು..!?

  ಸಿಎಂ ಸಿದ್ದರಾಮಯ್ಯ ಶುಕ್ರವಾರ  ಮಂಡಿಸಿದ ರಾಜ್ಯ ಬಜೆಟ್ ಬಗ್ಗೆ ಕರಾವಳಿಯ ನೇತಾರರು ಏನಂದ್ರು..!? …

  ಕರಾವಳಿ ಜಿಲ್ಲೆಗಳ ಪಾಲಿಗೆ ಕುರುಡು ಬಜೆಟ್ : ಶಾಸಕ ಯಶ್ ಪಾಲ್ ಸುವರ್ಣ
  ಸಿರಾಮಯ್ಯ ಸರಕಾರದ ಇಂದಿನ ಬಜೆಟ್ ನಲ್ಲಿ ಕರಾವಳಿ ಜಿಲ್ಲೆಗಳನ್ನು ಸಂಪೂರ್ಣವಾಗಿ ಕಡೆಗಣಿಸಿ ಕುರುಡು ನೀತಿಯ ಬಜೆಟ್ ಮಂಡಿಸಿ ಕರಾವಳಿ ಜಿಲ್ಲೆಯನ್ನು ಸದಾ ನಿರ್ಲಕ್ಷಿಸುವ ತನ್ನ ಧೋರಣೆಯನ್ನು ಈ ಬಾರಿಯೂ ಮುಂದುವರಿಸಿದ್ದಾರೆ. ಉಡುಪಿ ಜಿಲ್ಲೆಯ ಮೀನುಗಾರಿಕೆ ಬಂದರುಗಳ ಅಭಿವೃದ್ದಿ ಯೋಜನೆ, ಸರಕಾರಿ ಮೆಡಿಕಲ್ ಕಾಲೇಜು,ಯುವ ಜನತೆಗೆ ಉದ್ಯೋಗ ಸೃಷ್ಟಿ, ಗ್ರಾಮಾಂತರ ಭಾಗದಲ್ಲಿ ಸರಕಾರಿ ಬಸ್ಸು ಸೇವೆ ಹೆಚ್ಚಳ ಸಹಿತ ಜನತೆಯ ಯಾವುದೇ ಬೇಡಿಕೆಗಳ ಈಡೇರಿಕೆ ಬಗ್ಗೆ ಬಜೆಟ್ ನಲ್ಲಿ ಘೋಷಣೆ ಮಾಡಿಲ್ಲ.ಮೀನುಗಾರಿಕೆ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯ 3,000 ಕೋಟಿ ಅನುದಾನವನ್ನು ತನ್ನದೇ ಅನುದಾನ ಎಂದು ಘೋಷಿಸುವ ಮೂಲಕ ಮೀನುಗಾರರಿಗೆ ತಪ್ಪು ಮಾಹಿತಿ ನೀಡಲು ಮುಂದಾಗಿರುವುದು ದುರದೃಷ್ಟಕರ.ಗ್ಯಾರಂಟಿ ಯೋಜನೆಗಳ ಹೊರೆಯಿಂದ ಪಾರಾಗಲು ರಾಜ್ಯದ ಸಮಗ್ರ ಅಭಿವೃದ್ಧಿಗೆ ಪೂರಕವಾದ ಮೂಲಭೂತ ಸೌಕರ್ಯಗಳ ಯೋಜನೆಗೆ ತಿಲಾಂಜಲಿ ನೀಡಿ ರಾಜ್ಯದ ಆರ್ಥಿಕ ವ್ಯವಸ್ಥೆಯ ಹಳಿ ತಪ್ಪಿಸಿದ್ದಾರೆ.

  ಸಮಾಜದ ಎಲ್ಲಾ ವರ್ಗದ ಜನರಿಗೆ ಸಹಕಾರಿ ಬಜೆಟ್ : ರಮೇಶ ಕಾಂಚನ್
  ಭಾರತದ ಇತಿಹಾಸದಲ್ಲೇ ದಾಖಲೆಯ 15ನೇ ಬಜೆಟ್ ಮಂಡಿಸಿರುವ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಜನಪರ 5 ಗ್ಯಾರಂಟಿ ಯೋಜನೆಗಳಿಗೆ ಹಣವನ್ನು ಹೊಂದಿಸುವುದರ ಜೊತೆಗೆ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ನೀಡುವ ಗುರಿಯನ್ನು ಹೊಂದಿರುವ ಹೊಸ ಯೋಜನೆಗಳನ್ನು ನೀಡಿದ್ದಾರೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಸಮುದ್ರ ಮೀನುಗಾರಿಕೆಗೆ ತೆರಳಿದಾಗ ಅಪಘಾತ, ಅನಾರೋಗ್ಯಕ್ಕೆ ತುತ್ತಾದ ಮೀನುಗಾರರ ರಕ್ಷಣೆಗೆ 7 ಕೋಟಿ ರೂಪಾಯಿ ವೆಚ್ಚದಲ್ಲಿ ರಾಜ್ಯದ ಪ್ರಪ್ರಥಮ ಸಮುದ್ರ ಆಂಬುಲೆನ್ಸ್ ಖರೀದಿಸಲು ರಾಜ್ಯ ಸರ್ಕಾರವು ತೀರ್ಮಾನಿಸಿದೆ.ಮತ್ಸ್ಯ ಆಶಾಕಿರಣ ಯೋಜನೆಯಡಿ ಮೀನುಗಾರಿಕೆ ನಿಷೇಧ ಅವಧಿಯಲ್ಲಿ ಮೀನುಗಾರರಿಗೆ ನೀಡುವ ಪರಿಹಾರ ಮೊತ್ತದ ರಾಜ್ಯದ ಪಾಲನ್ನು ₹1500 ರಿಂದ ₹3000ಕ್ಕೆ ಹೆಚ್ಚಳ.ಅಂಗನವಾಡಿ ಕಾರ್ಯಕರ್ತೆಯರಿಗೆ 90 ಕೋಟಿ ರೂಪಾಯಿ ವೆಚ್ಚದಲ್ಲಿ 75.938 ಸ್ಮಾರ್ಟ್‌ಫೋನ್ ಹಾಗೂ 20,000 ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ತರಬೇತಿ ಕಾರ್ಯಾಗಾರ ಪ್ರಾರಂಭಿಸಲು ತೀರ್ಮಾನ ಮಾಡಿರುವುದು ಸೇರಿ ಸಮಾಜದ ಎಲ್ಲಾ ವರ್ಗದ ಜನರಿಗೆ ಸಹಕಾರಿಯಾಗಲಿರುವ ಬಜೆಟ್ ಇದಾಗಿದ್ದು ಇಂತಹ ಜನಪರ ಬಜೆಟ್ ಮಂಡಿಸಿದ ಸನ್ಮಾನ್ಯ ಸಿಎಂ ಸಿದ್ದರಾಮಯ್ಯ ಅವರಿಗೆ ಅಭಿನಂದನೆಗಳನ್ನು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ತಿಳಿಸಿದ್ದಾರೆ.

  ರಾಜ್ಯದ ಆರ್ಥಿಕತೆಗೆ ಚೈತನ್ಯ: MLC ಹರೀಶ್ ಕುಮಾರ್
  ರಾಜ್ಯದಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ಬಳಿಕ ಅಭಿವೃದ್ಧಿ ಶಕೆಯೇ ಆರಂಭವಾಗಿದೆ. ರಾಜ್ಯ ಸರಕಾರದ ಗ್ಯಾರಂಟಿ ಯೋಜನೆ ಜನಸಾಮಾನ್ಯರು, ಮಧ್ಯಮ ವರ್ಗದವರ ಆರ್ಥಿಕತೆಗೆ ಚೈತನ್ಯ ನೀಡಿದ್ದು, ಸಿದ್ಧರಾಮಯ್ಯರು ಮಂಡಿಸಿದ ಈ ವರ್ಷದ ಬಜೆಟ್ ರಾಜ್ಯವನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯಲಿದೆ. ಅದರಲ್ಲೂ ಕರಾವಳಿ ಜಿಲ್ಲೆಯ ಪ್ರಮುಖವಾಗಿರುವ ಮೀನುಗಾರಿಕಾ ಕ್ಷೇತ್ರಕ್ಕೆ 3ಸಾವಿರ ಕೋಟಿ ರೂ. ಮೊತ್ತದ ಯೋಜನೆ, ಸಮುದ್ರ ಅಂಬುಲೆನ್ಸ್, ಪುತ್ತೂರಿನಲ್ಲಿ ಪಶು ವೈದ್ಯಕೀಯ ಕಾಲೇಜು ನಿಜಕ್ಕೂ ಒಳ್ಳೆಯ ಯೋಜನೆಗಳು. ಈ ಮೂಲಕ ಸಿದ್ಧರಾಮಯ್ಯರು ಆರ್ಥಿಕ ವಲಯದ ಮಾಸ್ಟರ್ ಮೈಂಡ್ ಎನ್ನುವುದನ್ನು ಮತ್ತೆ ಸಾಬೀತು ಮಾಡಿದ್ದಾರೆ.

  ಕರಾವಳಿಗೆ ಭರಪೂರ ಕೊಡುಗೆ: ಮಂಜುನಾಥ ಭಂಡಾರಿ
  ರಾಜ್ಯ ಸರಕಾರದ ಬಜೆಟ್ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಕೃಷಿ, ಮೀನುಗಾರಿಕೆ, ಉದ್ಯಮ, ಕೈಗಾರಿಕೆ ಸೇರಿದಂತೆ ಎಲ್ಲ ವಲಯಗಳಿಗೆ ಪ್ರೋತ್ಸಾಹ ನೀಡಲಾಗಿದೆ. ರೈತ ಮಹಿಳೆಯರಿಗೆ ಹಸು-ಎಮ್ಮೆ ಖರೀದಿಗೆ ಸಾಲ ಸೌಲಭ್ಯ, ಮತ್ಸ್ಯ ಆಶಾಕಿರಣ ಯೋಜನೆಯಡಿ ಕರಾವಳಿ ಮೀನುಗಾರರ ಪರಿಹಾರ ಮೊತ್ತ ೩ಸಾವಿರ ರೂ. ಹೆಚ್ಚಳ, ಕರಾವಳಿಯಲ್ಲಿ ಬಲಿಷ್ಠವಾಗಿರುವ ಸ್ವಸಹಾಯ ಗುಂಪುಗಳಿಗೆ 10 ಕೋಟಿ ರೂ. ಮೀಸಲು, ಮಂಜೂರಿನಲ್ಲಿ ಹಜ್ ಭವನ, ಗ್ರಾಮ ಪಂಚಾಯಿತಿಗಳಲ್ಲಿ ಇ-ಆಫೀಸ್ ಆರಂಭ, ಅಂಗನವಾಡಿ ಕಾರ್ಯಕರ್ತರಿಗೆ ಉಚಿತ ಸ್ಮಾರ್ಟ್ ಫೋನ್, ಮಂಗಳೂರಿನಲ್ಲಿ ಅತ್ಯಾಧುನಿಕ ಕೃಷಿ ಸಂಕೀರ್ಣ ಸ್ಥಾಪನೆ, ಅಡಕೆ ರೋಗ ನಿಯಂತ್ರಣಕ್ಕೆ ಸಂಶೋಧನೆ ಹಾಗೂ ಸಸ್ಯ ಸಂರಕ್ಷಣೆ ಉತ್ತೇಜನ ನೀಡಲಾಗಿದೆ, ಕರಾವಳಿಯ ಹಿರಿಯ ಪತ್ರಕರ್ತ ರಘುರಾಮ ವಡ್ಡರ್ಸೆ ಹೆಸರಲ್ಲಿ ಪ್ರಶಸ್ತಿ, ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಆರಂಭಿಸಿರುವುದು ಒಳ್ಳೆಯ ಯೋಜನೆ.

  ರಾಜ್ಯದ ಸರ್ವಾಂಗೀಣ ಅಭಿವೃದ್ಧಿ, ಸಮಬಾಳು ಸಮಪಾಲು ಬಜೆಟ್, : ಮಾಜಿ ಸಚಿವ ರಮಾನಾಥ ರೈ
  ಕಾಂಗ್ರೆಸ್ ಸರ್ಕಾರ ಮತ್ತೊಂದು ಜನಪರ ಬಜೆಟ್ ಮಂಡನೆ ಮಾಡಿದ್ದು ಸಿಎಂ ಸಿದ್ದರಾಮಯ್ಯ ಅವರ ದಾಖಲೆಯ 15ನೇ ಬಜೆಟ್ ಗ್ಯಾರಂಟಿ ಯೋಜನೆಗಳ ಜೊತೆಗೆ ರಾಜ್ಯದ ಸಮಗ್ರ ಅಭಿವೃದ್ಧಿ ಮತ್ತು ಎಲ್ಲಾ ವರ್ಗದ ಜನರಿಗೆ ಪಾಲು ನೀಡಲಾಗಿದೆ. ಇದು ಸರ್ವರಿಗೂ ಸಮಬಾಳು ಸಮಬಾಳು ಧ್ಯೇಯದಿಂದ ಕೂಡಿರುವ ಸರ್ವರ ಅಭಿವೃದ್ಧಿಯ ಗ್ಯಾರಂಟಿ ಬಜೆಟ್.
  ಕರಾವಳಿ ಕರ್ನಾಟಕ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಬಜೆಟ್ ನಲ್ಲಿ ಹೆಚ್ಚಿನ ಪ್ರಾಶಸ್ತ್ಯ ಸಿಕ್ಕಿರುವುದು ಖುಷಿಯ ವಿಚಾರ. ಮೀನುಗಾರಿಕೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ 3,000 ಕೋಟಿ ರೂ. ಬೃಹತ್ ಮೊತ್ತದ ಯೋಜನೆ, 10 ಸಾವಿರ ವಸತಿರಹಿತ ಮೀನುಗಾರರಿಗೆ ಮನೆ ನಿರ್ಮಾಣಕ್ಕೆ ಸಹಾಯಧನ, ಮತ್ಸ್ಯ ಆಶಾಕಿರಣ ಯೋಜನೆಯಡಿ ಮೀನುಗಾರರ ಪರಿಹಾರ ಮೊತ್ತ ಹೆಚ್ಚಳ, ಸಮುದ್ರ ಆಂಬುಲೆನ್ಸ್ ಯೋಜನೆ, ಒಳನಾಡು ಸಾರಿಗೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಿದ್ದು, ಮಂಗಳೂರು ನಗರದಲ್ಲಿ ಅತ್ಯಾಧುನಿಕ ಕೃಷಿ ಸಂಕೀರ್ಣ ಸ್ಥಾಪನೆ, ಮಂಗಳೂರು ಬಂದರ್ ನಿಂದ ಬೆಂಗಳೂರು ವರೆಗೆ ಆರ್ಥಿಕ ಅಭಿವೃದ್ಧಿ ಕಾರಿಡಾರ್ ನಿರ್ಮಾಣ, ಮಂಗಳೂರು ನಗರದ ಸಮೀಪ ಇಂಟಿಗ್ರೇಟೆಡ್ ಟೌನ್ ಶಿಪ್ ಅಭಿವೃದ್ಧಿ, ಮಂಗಳೂರಿನಲ್ಲಿ ಹಜ್ ಭವನದ ನಿರ್ಮಾಣಕ್ಕೆ ಅನುದಾನ, ಪುತ್ತೂರಿನಲ್ಲಿ ಪಶು ವೈದ್ಯಕೀಯ ಕಾಲೇಜು, ಅಡಕೆ ರೋಗ ನಿಯಂತ್ರಣಕ್ಕೆ ಸಂಶೋಧನೆ, ನೇತ್ರಾವತಿ ನದಿಗಳಲ್ಲಿ ಜಲಮೆಟ್ರೋ ಸೇವೆಗಳನ್ನು ಪರಿಚಯಿಸಲು ಕಾರ್ಯಸಾಧ್ಯತಾ ವರದಿಯನ್ನು ತಯಾರಿಸುವ ಆಶ್ವಾಸನೆ, ಸ್ವಸಹಾಯ ಗುಂಪುಗಳಿಗೆ ಸಿಕ್ಕಿರುವ ಅನುದಾನ ಸೇರಿದಂತೆ ಕರಾವಳಿಗೆ ಮತ್ತು ದಕ್ಷಿಣ ಕನ್ನಡದ ಜಿಲ್ಲೆಗೆ ಬಜೆಟ್ ನಲ್ಲಿ ಬಂಪರ್ ಕೊಡುಗೆಗಳನ್ನು ನೀಡಲಾಗಿದೆ. ಕರಾವಳಿಯ ಜನರ ಪರವಾಗಿ ಸರ್ಕಾರ ಮತ್ತು ಮುಖ್ಯಮಂತ್ರಿಗಳಿಗೆ ಧನ್ಯವಾದ ಸಲ್ಲಿಸುತ್ತೇನೆ.

  ಇತ್ತೀಚಿನ ವರ್ಷಗಳಲ್ಲಿ ರಾಜ್ಯ ಕಂಡ ಕೆಟ್ಟ ಬಜೆಟ್ : ಸುನೀಲ್ ಕುಮಾರ್
  ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್ ಇತ್ತೀಚಿನ ವರ್ಷಗಳಲ್ಲಿ ರಾಜ್ಯ ಕಂಡ ಕೆಟ್ಟ ಬಜೆಟ್ ಆಗಿದ್ದು, ಕರಾವಳಿ ಸೇರಿದಂತೆ ರಾಜ್ಯದ ಯಾವುದೇ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿಲ್ಲ.ಬಜೆಟ್ ಪೂರ್ತಿ ಸುಳ್ಳುಗಳೇ ತುಂಬಿದ್ದು, ಮುಗ್ಗರಿಸುತ್ತಿರುವ ರಾಜ್ಯದ ಆರ್ಥಿಕತೆಯ ಪ್ರತಿಬಿಂಬ ಇದಾಗಿದೆ.ಬಂಟ ಅಭಿವೃದ್ಧಿ ನಿಗಮ ಸ್ಥಾಪನೆಗೆ ಬಜೆಟ್ ನಲ್ಲಿ ಅವಕಾಶ ಕಲ್ಪಿಸುತ್ತೇನೆ ಎಂದು ಘೋಷಿಸಿದ್ದ ಸಿದ್ದರಾಮಯ್ಯ ಕೈ ಕೊಟ್ಟಿದ್ದಾರೆ. ಬ್ರಹ್ಮರ್ಷಿ ನಾರಾಯಣಗುರು ಅಭಿವೃದ್ಧಿ ನಿಗಮಕ್ಕೆ ೧ ರೂ.ಅನುದಾನವನ್ನೂ ನೀಡಿಲ್ಲ. ಪಶ್ಚಿಮ ವಾಹಿನಿ ಸೇರಿದಂತೆ ನೀರಾವರಿ ಯೋಜನೆಗಳಿಗೆ ಅನುದಾನ ಕಲ್ಪಿಸಿಲ್ಲ. ಮಂಗಳೂರು- ಬೆಂಗಳೂರು ಕಾರಿಡಾರ್ ಹೆಸರೇನೋ ಕೇಳುವುದಕ್ಕೆ ಚೆನ್ನಾಗಿದೆ. ಆದರೆ ಅದರ ಸ್ವರೂಪ ಹಾಗೂ ಅನುದಾನದ ಬಗ್ಗೆ ಉಲ್ಲೇಖವೇ ಇಲ್ಲ. ಒಟ್ಟಾರೆಯಾಗಿ ಇದೊಂದು ಬೋಗಸ್ ಬಜೆಟ್

  Share Information
  Advertisement
  Click to comment

  You must be logged in to post a comment Login

  Leave a Reply